
ಚಿಂತಾಮಣಿ: ತಾಲ್ಲೂಕಿನ ಕೈವಾರ ಅಂಬೇಡ್ಕರ್ ಅನುದಾನಿತ ಶಾಲೆಯಲ್ಲಿ ಬುಧವಾರ ಸಂವಿಧಾನ ದಿನವನ್ನು ಆಚರಿಸಲಾಯಿತು.
ಶಿಕ್ಷಕ ಶ್ರೀಧರ್ ಹಿರೇಮಠ್ ಮಾತನಾಡಿ, ವಿಶ್ವದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನ ದೊಡ್ಡ ಲಿಖಿತ ಸಂವಿಧಾನ. ಸಂವಿಧಾನ ರಚನಾ ಸಮಿತಿಯು 60 ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ 2 ವರ್ಷ 11 ತಿಂಗಳು ಸಮಯ ತೆಗೆದುಕೊಂಡು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೈಬರಹದಲ್ಲಿ ರಚನೆ ಮಾಡಿದ್ದಾರೆ ಎಂದು ತಿಳಿಸಿದರು.
ದೆಹಲಿಯ ಸಂಸತ್ ಭವನದಲ್ಲಿ ಸಂವಿಧಾನ ಹಸ್ತಪ್ರತಿಯನ್ನು ಈಗಲೂ ನೋಡಬಹುದು. ಸಂವಿಧಾನ ಹಬ್ಬವನ್ನು ನಾವು ವರ್ಷದಲ್ಲಿ ಜನವರಿ 26 ರಂದು ಮತ್ತು ನವೆಂಬರ್ 26 ರಂದು ಆಚರಣೆ ಮಾಡುತ್ತೇವೆ. 2015ರಿಂದ ಸಂವಿಧಾನ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಮಾಜ ಶಿಕ್ಷಕ ಉಮೇಶ ಮಾತನಾಡಿ, ಅಂಬೇಡ್ಕರ್ ಅಪಾರ ಜ್ಞಾನ ಹೊಂದಿದ್ದರು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಅವರ ಮೂಲಮಂತ್ರಗಳಾಗಿದ್ದವು. ನಾವು ಸುರಕ್ಷಿತ, ಸ್ವತಂತ್ರವಾಗಿರಲು ರಚಿಸಿದ ಸಂವಿಧಾನವೇ ಶ್ರೀರಕ್ಷೆಯಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಸುರೇಶ ಮಾತನಾಡಿ, ಸಂವಿಧಾನ ಕೊಡಮಾಡಿದ ಹಕ್ಕುಗಳಿಂದಾಗಿ ನಾವೆಲ್ಲರೂ ಶಿಕ್ಷಣ ಪಡೆಯುವಂತಾಗಿದೆ. ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ನಾವು ಮರೆಯಬಾರದು. ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತರ ರಾಷ್ಟ್ರೀಯ ಭಾವೈಕ್ಯ ಮೂಡಿಸುವ ಸಂವಿಧಾನ ನಮ್ಮದು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸಂವಿಧಾನ ಮೌಲ್ಯಗಳ ಕುರಿತು ಭಾಷಣ, ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಿಕ್ಷಕ ಲೋಕೇಶಪ್ಪ, ರತ್ನಾ, ಶ್ರೀಧರ್ ಹಿರೇಮಠ, ವಿವೇಕ್, ಮಂಜುಳ, ಭಾಗ್ಯಮ್ಮ, ವೆಂಕಟರತ್ನಮ್ಮ, ಧನುಷ್, ದಿವ್ಯ, ನೇತ್ರಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.