ADVERTISEMENT

ಸುಧಾಕರ್, ವಿಶ್ವನಾಥ್‌ ನಡುವೆ ಮುಂದುವರಿದ ಮಾತಿನ ಚಕಮಕಿ

ಉಪ ಚುನಾವಣೆಯಲ್ಲಿ ಸೋತವರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಗೆ ಶಾಸಕ ಸ್ಥಾನ ತ್ಯಾಗ ಮಾಡಿದವರಲ್ಲೇ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 20:12 IST
Last Updated 30 ಜನವರಿ 2020, 20:12 IST
ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಮತ್ತು ಮಾಜಿ ಸಚಿವ ಎಚ್.ವಿಶ್ವನಾಥ್
ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಮತ್ತು ಮಾಜಿ ಸಚಿವ ಎಚ್.ವಿಶ್ವನಾಥ್   

ಚಿಕ್ಕಬಳ್ಳಾಪುರ: ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ನಡುವೆಯೇ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳಿಸಿ, ಬಿಜೆಪಿ ಅಧಿಕಾರಕ್ಕೆ ಬರಲು ಶಾಸಕ ಸ್ಥಾನ ತ್ಯಾಗ ಮಾಡಿದವರೇ ಇದೀಗ ಪರಸ್ಪರ ಟೀಕೆಗೆ ಮುಂದಾಗುವ ಮೂಲಕ ಚರ್ಚೆಗೆ ಎಡೆ ಮಾಡಿಕೊಡುತ್ತಿದ್ದಾರೆ.

ಉಪ ಚುನಾವಣೆಯಲ್ಲಿ ಸೋತ ಎಚ್‌.ವಿಶ್ವನಾಥ್‌ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ವಿಚಾರವಾಗಿ ಇದೀಗ ವಿಶ್ವನಾಥ್‌ ಮತ್ತು ಶಾಸಕ ಡಾ.ಕೆ.ಸುಧಾಕರ್ ಅವರ ನಡುವೆ ಹೊಮ್ಮುತ್ತಿರುವ ಮಾತಿನ ಕಿಡಿಗಳು, ರಾಜಕೀಯವಾಗಿ ಹಲವು ವಿಶ್ಲೇಷಣೆಗಳಿಗೆ ಕಾರಣವಾಗುತ್ತಿವೆ.

ಇತ್ತೀಚೆಗೆ ಸುತ್ತೂರು ಜಾತ್ರೆ ಸಂದರ್ಭದಲ್ಲಿ ಸುಧಾಕರ್ ಅವರು, ‘ವಿಶ್ವನಾಥ್ ಅವರು ಬಹಿರಂಗವಾಗಿ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಅವರಿಗೆ ಹುಣಸೂರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬೇಡ. ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರೂ ಅವರು ಸ್ಪರ್ಧೆ ಮಾಡಿ ಸೋತಿದ್ದಾರೆ. ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಕಾನೂನು ತೊಡಕುಗಳಿವೆ’ ಎಂದು ಹೇಳಿದ್ದರು.

ADVERTISEMENT

ಇದೇ ವೇಳೆ ‘ಸೋತವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ, ಸುಪ್ರೀಂ ಕೋರ್ಟ್ ತೀರ್ಪು ಏನು ಹೇಳುತ್ತೆ ಎಂಬುದು ಮುಖ್ಯ ಅಲ್ಲವೆ? ಸಚಿವ ಸ್ಥಾನ ಯಾರಿಗೆ ಕೊಡಬಹುದು ಎಂಬುದು ಸುಪ್ರೀಂ ತೀರ್ಪಿನಲ್ಲಿ ಸ್ಪಷ್ಟವಾಗಿದೆ. ನಮ್ಮ ಮಾತಿಗಿಂತ ಕೋರ್ಟ್ ತೀರ್ಪು ಮಹತ್ವದ್ದು’ ಎಂದು ತಿಳಿಸಿದರು.

ಈ ಹೇಳಿಕೆಗೆ ಕಿಡಿಕಾರಿದ್ದ ವಿಶ್ವನಾಥ್‌ ಅವರು, ‘ಸುಧಾಕರ್ ಒಬ್ಬ ವೈದ್ಯ. ನಾನು ವಕೀಲ. ನಾನು ಸುಪ್ರೀಂ ಕೋರ್ಟ್‌ ತೀರ್ಪು ಓದಿಕೊಂಡಿರುವೆ. ಆ ತೀರ್ಪಿನಲ್ಲಿ ಅಪವಿತ್ರರು ಚುನಾವಣೆಗೆ ಸ್ಪರ್ಧಿಸಿ ಪವಿತ್ರರಾಗಿ ಬನ್ನಿ ಎಂದು ಹೇಳಲಾಗಿದೆ. ಎಲ್ಲಿಯೂ ಕೋರ್ಟ್ ಗೆಲುವು, ಸೋಲಿನ ಬಗ್ಗೆ ಹೇಳಿಲ್ಲ. ಸುಧಾಕರ್ ಅವರು ವಕೀಲರ ಬಳಿ ಹೋಗಿ ನ್ಯಾಯಾಲಯದ ತೀರ್ಪು ತಿಳಿದುಕೊಳ್ಳಲಿ. ಎಲ್ಲೋ ಪಾಠ ಹೇಳಿಸಿಕೊಂಡು ಬಂದು ಹೇಳುತ್ತಿದ್ದಾರೆ’ ಎಂದು ಸುಧಾಕರ್ ಅವರಿಗೆ ತಿರುಗೇಟು ನೀಡಿದ್ದರು.

ವಿಶ್ವನಾಥ್‌ ಅವರ ಈ ಹೇಳಿಕೆಗೆ ಗರಂ ಆಗಿರುವ ಸುಧಾಕರ್ ಅವರು ಗುರುವಾರ, ‘ಅವರಿವರ ಮಾತು ಕೇಳಿ ಮಾತನಾಡಲು ನಾನೇನು ಎಳೆ ಮಗುನಾ? ನಾನೂ ಮೂರು ಬಾರಿ ಗೆದ್ದು ಶಾಸಕನಾಗಿರುವೆ. ವೈದ್ಯ ಕೂಡ ಆಗಿರುವೆ. ನಾನು ಪ್ರಪಂಚ ನೋಡಿರುವೆ. ನನಗೆ ಯಾರು ಹೇಳಿಕೋಡೋದು ಏನೂ ಇಲ್ಲ’ ಎಂದು ಎದುರೇಟು ನೀಡಿದರು.

‘ವಿಶ್ವನಾಥ್ ಅವರಿಗೆ ಒಳ್ಳೆಯದಾಗಲಿ ಎಂದು ಬಯಸುವವರಲ್ಲಿ ನಾನೂ ಒಬ್ಬ. ಬಹಿರಂಗವಾಗಿ ಮಾಧ್ಯಮಗಳಲ್ಲಿ ಮಾತನಾಡುವುದರಿಂದ ಪ್ರಯೋಜನವಿಲ್ಲ. ಸೂಕ್ತವಾದ ವೇದಿಕೆಯಲ್ಲಿ ಯಾರಿಗೆ ಹೇಗೆ ಹೇಳಬೇಕೋ ಹಾಗೆ ಅರ್ಥೈಸಿ ಮಂಡಿಸೋಣ ಅಂತ ಹೇಳಿದ್ದೆ. ಆದರೆ ವಿಶ್ವನಾಥ್ ಅವರು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅವರ ನೋವು ನನಗೆ ಅರ್ಥವಾಗುತ್ತದೆ. ಉಪ ಚುನಾವಣೆಯಲ್ಲಿ ಸೋತಿರುವ ವಿಶ್ವನಾಥ್‌ ಮತ್ತು ಎಂಟಿಬಿ ನಾಗರಾಜ್ ಅವರ ಜತೆ ಜೀವನಪರ್ಯಂತ ಇರುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.