ADVERTISEMENT

ಭ್ರೂಣಲಿಂಗ ಪತ್ತೆಗೆ ಕಡಿವಾಣ ಹಾಕಿ

ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತ ಕಾರ್ಯಗಾರದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್‌ಕುಮಾರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 19:46 IST
Last Updated 14 ಆಗಸ್ಟ್ 2019, 19:46 IST
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ   

ಚಿಕ್ಕಬಳ್ಳಾಪುರ: ‘ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಪ್ರಕರಣಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಮತ್ತು ನಿರ್ಬಂಧ ಕ್ರಮ ಜಾರಿಗೊಳಿಸಬೇಕು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್‌ಕುಮಾರ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘ಹೆಣ್ಣು ಭ್ರೂಣ ಹತ್ಯೆಯ ಕಾರಣದಿಂದ ನಮ್ಮ ದೇಶದಲ್ಲಿ ಲಿಂಗ ತಾರತಮ್ಯ ಹೆಚ್ಚುತ್ತಿರುವುದು ಕಳವಳದ ವಿಚಾರ. ಭಾರತದಲ್ಲಿ ಪ್ರಸ್ತುತ 1,000 ಪುರುಷರಿಗೆ 920 ಮಹಿಳೆಯರಿದ್ದರೆ, ರಾಜ್ಯದಲ್ಲಿ 1,000 ಪುರುಷರಿಗೆ 940 ಮಹಿಳೆಯರಿದ್ದಾರೆ. ಈ ಅಸಮಾನತೆಯ ಹೋಗಲಾಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಂಡಿದ್ದು, ಅದರ ಅನುಷ್ಠಾನದ ಹೊಣೆ ಅಧಿಕಾರಿಗಳ ಮೇಲಿದೆ’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಂಡಿರುವ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದೈನಂದಿನ ವರದಿ ಪರಿಶೀಲಿಸುವುದು, ಅನಿರೀಕ್ಷಿತ ಭೇಟಿ ನೀಡುವ ಮೂಲಕ ನಿಗಾವಹಿಸಬೇಕು. ಅನಧಿಕೃತವಾಗಿ ನಡೆಯುತ್ತಿರುವ ಭ್ರೂಣ ಹತ್ಯೆ, ಗರ್ಭಪಾತ ಕೇಂದ್ರಗಳ ಬಗ್ಗೆ ಕಣ್ಗಾವಲು ಇರಿಸಿ ಎಲ್ಲಾ ಮೂಲಗಳಿಂದ ಮಾಹಿತಿ ಪಡೆದು ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಗುರುತಿಸಿ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು’ ಎಂದರು.

‘ಪ್ರತಿ ದಿನ ಲಿಂಗಾನುಪಾತದ ವ್ಯತ್ಯಾಸಗಳನ್ನು ಗಮನಿಸುವುದು. ಪ್ರತಿಯೊಂದು ದಾಖಲೆಗಳನ್ನು ಅಂತರ್ಜಾಲದಲ್ಲಿ ದಾಖಲಿಸುವುದು. ದಾಖಲಾದ ದಾಖಲಾತಿಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು. ಕಚೇರಿಯ ದಾಖಲೆಗಳಿಗೂ ಮತ್ತು ಅಂತರ್ಜಾಲದಲ್ಲಿ ದಾಖಲಿಸಿರುವ ದಾಖಲೆಗಳಿಗೂ ವ್ಯತ್ಯಾಸ ಬರದಂತೆ ನೋಡಿಕೊಳ್ಳುವುದು ವೈದ್ಯರ ಹಾಗೂ ಸಿಬ್ಬಂದಿಯ ಕರ್ತವ್ಯ’ ಎಂದು ತಿಳಿಸಿದರು.

‘ಈಗಾಗಲೇ ರಾಜ್ಯದ ವಿವಿಧ ಕಡೆಗಳಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ವಶಕ್ಕೆ ತೆಗೆದುಕೊಂಡು ಸಂಬಂಧಪಟ್ಟ ವೈದ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಸಾರ್ವಜನಿಕರಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್ ಕುಮಾರ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ ಎಂ. ವೆಂಕಟಾಚಲಪತಿ, ಕಾನೂನು ಸಲಹೆಗಾರ ಸುಧಾಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.