ADVERTISEMENT

ಕೊರೊನಾ ಭೀತಿ: ಜಿಲ್ಲೆಯಲ್ಲಿ ಕಟ್ಟೆಚ್ಚರ

ಶಾಲಾ–ಕಾಲೇಜುಗಳಿಗೆ ರಜೆ ಘೋಷಣೆ, ನಗರದಲ್ಲಿ ಬಾಗಿಲು ಮುಚ್ಚಿದ ಚಿತ್ರಮಂದಿರಗಳು, ವಿರಳವಾದ ಜನ ಸಂಚಾರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 13:48 IST
Last Updated 14 ಮಾರ್ಚ್ 2020, 13:48 IST
ನಗರದ ಬಾಲಾಜಿ ಚಿತ್ರಮಂದಿರ ಬಾಗಿಲು ಮುಚ್ಚಿದ ಕಾರಣ ಪ್ರೇಕ್ಷಕರಿಲ್ಲದೆ ಭಣಗುಡುತ್ತಿತ್ತು.
ನಗರದ ಬಾಲಾಜಿ ಚಿತ್ರಮಂದಿರ ಬಾಗಿಲು ಮುಚ್ಚಿದ ಕಾರಣ ಪ್ರೇಕ್ಷಕರಿಲ್ಲದೆ ಭಣಗುಡುತ್ತಿತ್ತು.   

ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ಹರಡುವ ಭೀತಿ ಎದುರಾದ ಬೆನ್ನಲ್ಲೇ, ಜಿಲ್ಲೆಯಲ್ಲೂ ಶನಿವಾರದಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಸರ್ಕಾರದ ಆದೇಶದಂತೆ ಚಿತ್ರಮಂದಿರ, ಸಭೆ, ಸಮಾರಂಭ, ಜಾತ್ರೆ, ಮದುವೆ, ಸಂತೆ, ಸಮಾವೇಶ, ಪ್ರದರ್ಶನ, ಕ್ರೀಡಾಕೂಟಗಳನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ.

ನಗರದಲ್ಲಿ ಶನಿವಾರದಿಂದಲೇ ಚಿತ್ರಮಂದಿರಗಳು ಸ್ಥಗಿತಗೊಂಡಿದ್ದವು. ಈ ಬಗ್ಗೆ ಅರಿವಿರದ ಜನರು ಬಾಗಿಲು ಮುಚ್ಚಿದ ಚಿತ್ರಮಂದಿರ ಕಂಡು ವಾಪಾಸಾಗುತ್ತಿದ್ದ ದೃಶ್ಯಗಳು ಗೋಚರಿಸಿದವು. ನಗರದಲ್ಲಿ ದಿನವಿಡೀ ಜನ ಸಂಚಾರ ವಿರಳವಾಗಿತ್ತು. ಚಿಕನ್, ಮಟನ್ ಮಾರಾಟ ಮಳಿಗೆಗಳು ಗ್ರಾಹಕರಿಲ್ಲದೆ ಭಣಗುಟ್ಟುತ್ತಿದ್ದವು.

ಮಾಂಸಾಹಾರಿ ಹೋಟೆಲ್‌ಗಳಲ್ಲಿ ಗಿರಾಕಿಗಳ ಸಂಖ್ಯೆ ಬೆರಳೆಣಿಕೆಯಲ್ಲಿ ಕಂಡುಬಂತು. ಸಾರಿಗೆ ವಾಹನಗಳಲ್ಲಿ ಕೂಡ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ರೈಲ್ವೆ ನಿಲ್ದಾಣದಲ್ಲಿ ಸಹ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು ಶಾಲಾ, ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದ ಕಾರಣ ನಗರದಲ್ಲಿ ಶನಿವಾರ ಬೆಳಿಗ್ಗೆ ಎಂದಿನ ಚಿತ್ರಣ ಕಂಡುಬರಲಿಲ್ಲ.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿಗಳಿಗೆ ಶನಿವಾರದಿಂದ ಮುಂದಿನ ಆದೇಶದವರೆಗೆ ರಜೆ ಘೋಷಿಸಿದ್ದು, ರಜೆ ಘೋಷಿಸಿದ ಅವಧಿಯಲ್ಲಿ ಪ್ರತಿ ಮಗುವಿಗೆ ಬಳಸುವ ಆಹಾರ ಧಾನ್ಯಗಳನ್ನು ಲೆಕ್ಕ ಹಾಕಿ ಮನೆಗೆ ವಿತರಿಸುವಂತೆ ಆದೇಶಿಸಿದೆ.

ಜಿಲ್ಲೆಯಲ್ಲಿ ಈವರೆಗೆ ಯಾವುದೇ ಶಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಸಿದ್ಧಪಡಿಸಲಾಗಿದೆ. ವೈರಸ್‌ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ಆರೋಗ್ಯ ಇಲಾಖೆ ಭರದ ಸಿದ್ಧತೆ ನಡೆಸಿದೆ. ಶಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರ ಪ್ರತ್ಯೇಕ ತಂಡ ರಚಿಸಲಾಗಿದೆ. ವಿದೇಶಕ್ಕೆ ಭೇಟಿ ನೀಡಿ ಬಂದವರ ಮಾಹಿತಿ ಕಲೆ ಹಾಕಿ ಅವರನ್ನು ಪರೀಕ್ಷೆಗಳಿಗೆ ಒಳಪಡಿಸುವ ಜತೆಗೆ ಅವರ ಮೇಲೆ ನಿಗಾ ಇಡಲಾಗಿದೆ. ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಪ್ರತ್ಯೇಕ ನಿಗಾ ಘಟಕ ತೆರೆಯಲು ಸಿದ್ಧತೆ ನಡೆದಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ರಸ್ತೆ ಬದಿಯ ತಿಂಡಿ ಟೆಂಟ್‌ಗಳು, ತಳ್ಳೋ ಗಾಡಿಗಳಲ್ಲಿ ಹಣ್ಣು, ಆಹಾರ ಪದಾರ್ಥಗಳನ್ನು ಮಾರುವವರ ಪರಿಶೀಲನೆ ಕಾರ್ಯ ನಡೆಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಮಾರ್ಚ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಘಟಕಗಳ ಸಮ್ಮೇಳನಗಳನ್ನು ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.