ADVERTISEMENT

ಚಿಂತಾಮಣಿಯಲ್ಲಿ ಐವರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 17:10 IST
Last Updated 21 ಜೂನ್ 2020, 17:10 IST
ಚಿಂತಾಮಣಿ ತಾಲ್ಲೂಕಿನ ಬೂರಗಮಾಕಲಹಳ್ಳಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೀಲ್‌ಡೌನ್ ಮಾಡಲಾಯಿತು
ಚಿಂತಾಮಣಿ ತಾಲ್ಲೂಕಿನ ಬೂರಗಮಾಕಲಹಳ್ಳಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೀಲ್‌ಡೌನ್ ಮಾಡಲಾಯಿತು   

ಚಿಂತಾಮಣಿ: ನಗರದಲ್ಲಿ ಒಂದು ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 4 ಕೋವಿಡ್‌ ಪ್ರಕರಣಗಳು ಭಾನುವಾರ ದೃಢಪಟ್ಟಿವೆ. ಗ್ರಾಮೀಣ ಭಾಗಗಳಲ್ಲೂ ಸೋಂಕು ಹರಡುತ್ತಿರುವುದು ಜನರಲ್ಲಿ ಆತಂಕಕ್ಕೆ ಎಡೆಮಾಡಿದೆ.

ನಗರದ ಅಶ್ವಿನಿ ಬಡಾವಣೆಯಲ್ಲಿ 40 ವರ್ಷದ ವ್ಯಕ್ತಿಗೆ, ನಗರದ ಹೊರವಲಯದ ಬೂರಗಮಾಕಲಹಳ್ಳಿಯಲ್ಲಿ 38 ವರ್ಷದ ಮಹಿಳೆಗೆ, ಕೈವಾರ ಹೋಬಳಿಯ ಮಲ್ಲಿಕಾಪುರ ಗ್ರಾಮದಲ್ಲಿ 17 ವರ್ಷದ ಬಾಲಕಿಗೆ, ಚಿಲಕಲನೇರ್ಪು ಹೋಬಳಿಯ ಹೊಸವುಡ್ಯ ಗ್ರಾಮದಲ್ಲಿ 60 ಮತ್ತು 70 ವರ್ಷದ ಇಬ್ಬರು ವೃದ್ಧೆಯರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಎಲ್ಲರನ್ನೂ ಚಿಕ್ಕಬಳ್ಳಾಪುರದ ಕೋವಿಡ್- 19 ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇ 9ರಂದು ನಗರದಲ್ಲಿ ಮೊದಲ ಪ್ರಕರಣ ಕಾಣಿಸಿಕೊಂಡಿತ್ತು. ನಂತರ ಒಂದೇ ಕುಟುಂಬದಲ್ಲಿ 6 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು ನಾಗರಿಕರು ಕಳವಳಗೊಂಡಿದ್ದರು.

ADVERTISEMENT

ಅವರೆಲ್ಲರೂ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದರು. ಒಂದು ತಿಂಗಳಿನಿಂದ ಯಾವುದೇ ಪ್ರಕರಣ ಇಲ್ಲದೆ ತಾಲ್ಲೂಕು ಕೊರೊನಾ ಮುಕ್ತವಾಗಿತ್ತು.

ಈಗಾಗಲೇ ತಾಲ್ಲೂಕಿನ ಕೊಂಗನಹಳ್ಳಿ ನಿವಾಸಿ ಮಹಿಳಾ ಕಾನ್‌ಸ್ಟೆಬಲ್‌ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಕುಟುಂಬದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈಗ ಮತ್ತೆ ಮೂರು ಗ್ರಾಮಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಗ್ರಾಮೀಣ ಭಾಗದ ನಾಗರಿಕರಲ್ಲೂ ಎದೆನಡುಕ ಆರಂಭವಾಗಿದೆ.

ನಗರದ ಅಶ್ವಿನಿ ಬಡಾವಣೆಯ ನ್ಯೂ ಪಬ್ಲಿಕ್ ಶಾಲೆಯ ಸಮೀಪ ವಾಸವಾಗಿರುವ ಮಹರಾಷ್ಟ್ರದ 40 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರು ಮಹರಾಷ್ಟ್ರ ಟೊಮೆಟೊ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದರು. ಚಿಂತಾಮಣಿಯಿಂದ ಟೊಮೆಟೊ ಖರೀದಿಸಿ ಮಹಾರಾಷ್ಟ್ರಕ್ಕೆ ಕಳುಹಿಸುವ ಮೇಲ್ವಿಚಾರಣೆ ಮಾಡುತ್ತಿದ್ದರು ಎನ್ನಲಾಗಿದೆ. ತಾಲ್ಲೂಕು ಆಡಳಿತ ಆ ರಸ್ತೆಯನ್ನು ಸೀಲ್‌ಡೌನ್ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಬೂರಗಮಾಕಲಹಳ್ಳಿಯ ಮಹಿಳೆ ಹೊರಗಡೆ ಎಲ್ಲಿಯೂ ಹೋಗಿಬಂದ ಇತಿಹಾಸವಿಲ್ಲ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾಗ ಅನುಮಾನಗೊಂಡು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದರು. ಹೇಗೆ ಸೋಂಕು ತಗುಲಿದೆ ಎಂಬುದನ್ನು ಪತ್ತೆ ಮಾಡಬೇಕಾಗಿದೆ.

ಮಲ್ಲಿಕಾಪುರದ 17 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಕಾರಣ ಪತ್ತೆಯಾಗಿಲ್ಲ. ಅವರ ಕುಟುಂಬ ಗ್ರಾಮದಲ್ಲಿ
ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದರು. ಬಾಲಕಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಚಿಂತಾಮಣಿಗೆ ಹೋಗಿದ್ದಳು ಎನ್ನಲಾಗಿದೆ.

ಹೊಸಹುಡ್ಯ ಗ್ರಾಮದ ಇಬ್ಬರು ವೃದ್ಧೆಯರು 10 ವರ್ಷಗಳಿಂದ ಹೈದರಾಬಾದ್‌ನಲ್ಲಿದ್ದರು. ಈಚೆಗೆ ಗ್ರಾಮಕ್ಕೆ ಮರಳಿದ್ದರು ಎನ್ನಲಾಗಿದೆ. ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿಗಳು ಆಯಾ ವ್ಯಕ್ತಿಗಳ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಿದ್ದಾರೆ. ಆಯಾ ಪ್ರದೇಶಗಳಲ್ಲಿ ಕ್ರಿಮಿನಾಶಕಗಳನ್ನು ಸಿಂಪಡಿಸಿ ಸೀಲ್‌ಡೌನ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.