ADVERTISEMENT

ಮಿತಿಮೀರಿದ ಭ್ರಷ್ಟಾಚಾರ: ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 5:07 IST
Last Updated 21 ಏಪ್ರಿಲ್ 2022, 5:07 IST
ಚಿಂತಾಮಣಿ ತಾಲ್ಲೂಕಿನ ಬುರುಡಗುಂಟೆ ಗ್ರಾಮದಲ್ಲಿ ಬುಧವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿದರು
ಚಿಂತಾಮಣಿ ತಾಲ್ಲೂಕಿನ ಬುರುಡಗುಂಟೆ ಗ್ರಾಮದಲ್ಲಿ ಬುಧವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿದರು   

ಚಿಂತಾಮಣಿ: ರಾಜ್ಯದಲ್ಲಿ ಮಿತಿಮೀರಿರುವ ಭ್ರಷ್ಟಾಚಾರಕ್ಕೆ ಮುಂದಿನ ದಿನಗಳಲ್ಲಿ ದೇಶದ ಜನರೇ ಸಿಡಿದೆದ್ದು ತಕ್ಕ ಉತ್ತರ ನೀಡುತ್ತಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ತಾಲ್ಲೂಕಿನ ಬುರುಡಗುಂಟೆ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಸಂವಿಧಾನ ನೀಡದಿದ್ದರೆ ಸಮಾಜದಲ್ಲಿ ದೇಶದಲ್ಲಿ ಇಂದಿಗೂ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಕಾಣಬೇಕಾಗಿತ್ತು. ಜಾತಿ ವ್ಯವಸ್ಥೆ ಕಡಿಮೆಯಾಗಿರುವುದಕ್ಕೆ ಮೂಲ ಕಾರಣ ಅಂಬೇಡ್ಕರ್. ದೇಶದಲ್ಲಿ ಇಂದಿಗೂ ಅಂಬೇಡ್ಕರ್‌ವಾದ ಮತ್ತು ಗೂಡ್ಸೆ ವಾದದ ನಡುವೆ ತಿಕ್ಕಾಟ ನಡೆಯುತ್ತಿದೆ ಎಂದರು.

ADVERTISEMENT

ಲಕ್ಷಾಂತರ ಗುತ್ತಿಗೆದಾರರನ್ನು ಪ್ರತಿನಿಧಿಸುವ ಗುತ್ತಿಗೆದಾರರ ಸಂಘ, ರಾಜ್ಯದಲ್ಲಿ ಹಿಂದೆ ಎಂದೂ ಕಂಡರಿಯದ ಶೇ 40 ಕಮೀಷನ್ ದಂದೆ ನಡೆಯುತ್ತಿದೆ. ಕಾಮಗಾರಿಗಳ ಗುಣಮಟ್ಟ ಕಾಪಾಡಲು ಸಾಧ್ಯವಿಲ್ಲ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗೆ ಪತ್ರ ಬರೆದಿದೆ. ಮತ್ತೊಂದೆಡೆ ಸ್ವಾಮೀಜಿ ಕಮೀಷನ್ ದಂಧೆ ನಡೆಯುತ್ತಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಟೀಕಿಸಿದರು.

ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕಾರಣ ಎಂದು ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದ್ದರೆ ಒದ್ದು ಒಳಗೆ ಹಾಕಲಿ ಎಂದು ಸವಾಲು ಹಾಕಿದರು.

ಕಾಮಗಾರಿ ನಡೆಸಿರುವ ಬಿಲ್ಲುಗಳನ್ನು ನೀಡದಿರುವುದಕ್ಕೆ ಹೈಕೋರ್ಟ್ ಗರಂ ಆಗಿದೆ. ಇನ್ನೂ ಎಷ್ಟು ಜನ ಗುತ್ತಿಗೆದಾರರು ಸಾಯಬೇಕು ಎಂದು ಖಾರವಾಗಿ ಪ್ರಶ್ನಿಸಿದೆ. ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ಆಯ್ಕೆಯಲ್ಲಿ ಭ್ರಷ್ಟಾಚಾರ, ಹೀಗೆ ರಾಜ್ಯದಲ್ಲಿ ಭ್ರಷ್ಟಾಚಾರತಾಂಡವವಾಡುತ್ತಿದೆ ಎಂದರು.

ಶಾಸಕ ವಿ.ಮುನಿಯಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಮತ್ತು ರೈತ ವಿರೋಧಿ ನೀತಿಗಳಿಂದ ಜನರು ತೀವ್ರಅಸಮಾಧಾನ ಹೊಂದಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ
ಎಂದರು.

ವಿಧಾನ ಪರಿಷತ್ತಿನ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ನಜೀರ್ ಅಹ್ಮದ್, ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಬ್ರಮಣಿ, ನಡಂಪಲ್ಲಿ ಶ್ರೀನಿವಾಸ್, ವಿಜಯನರಸಿಂಹ, ಬಿ.ಪಿ.ಮುನೀರ್ ಪಾಷಾ, ಮದ್ದಿರೆಡ್ಡಿ, ಅನಪ್ಪಲ್ಲಿ ಕೃಷ್ಣಾರೆಡ್ಡಿ, ಪಂಚಾಕ್ಷರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.