ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿಗೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 17 ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಒಬ್ಬ ಪ್ರಥಮ ದರ್ಜೆ ಸಹಾಯಕರು ಮೃತಪಟ್ಟಿದ್ದಾರೆ. ಚಿಂತಾಮಣಿ ತಾಲ್ಲೂಕಿನಲ್ಲಿಯೇ ಗರಿಷ್ಠ 9 ಶಿಕ್ಷಕರು ಸಾವನ್ನಪ್ಪಿದ್ದಾರೆ.
ಕೋವಿಡ್ ಸೋಂಕಿನ ಮೊದಲ ಅಲೆಗಿಂತ ಎರಡನೇ ಅಲೆಯು ಜಿಲ್ಲೆಯಲ್ಲಿ ಸಾವಿನ ಪ್ರಮಾಣವನ್ನು ಹೆಚ್ಚಿಸಿದೆ. ಈ ಅಲೆಯಲ್ಲಿ ಶಿಕ್ಷಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಮೊದಲ ಅಲೆಯಲ್ಲಿ ಚಿಂತಾಮಣಿಯ ಇಬ್ಬರು ಹಾಗೂ ಚಿಕ್ಕಬಳ್ಳಾಪುರದ ಒಬ್ಬ ಶಿಕ್ಷಕರು ಮೃತಪಟ್ಟಿದ್ದರು. ಎರಡನೇ ಅಲೆಯ ಏಪ್ರಿಲ್ 18ರಿಂದ ಮೇ 22ರವರೆಗೆ 15 ಮಂದಿ ಸಾವಿನ ದವಡೆ ಸೇರಿದ್ದಾರೆ.
ಹೀಗೆ ಎರಡನೇ ಅಲೆಯ ಸಂದರ್ಭದಲ್ಲಿ ಚಿಂತಾಮಣಿ, ಶಿಡ್ಲಘಟ್ಟ ಮತ್ತು ಗೌರಿಬಿದನೂರಿನ ತಲಾ ಒಬ್ಬ ಶಿಕ್ಷಕರು ಕೋವಿಡ್ ಕರ್ತವ್ಯಕ್ಕೆ ನಿಯೋಜನೆಯಾದ ವೇಳೆ ಮೃತಪಟ್ಟಿದ್ದಾರೆ. ಈ 18 ಮಂದಿಯಲ್ಲಿ 16 ಜನರು ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದರು.
ಕೋವಿಡ್ ಲಸಿಕೆಯ ಬಗ್ಗೆ ಅರಿವು, ಮನೆ ಮನೆಗಳಿಗೆ ಭೇಟಿ ನೀಡಿ ಸೋಂಕಿನ ಬಗ್ಗೆ ಜಾಗೃತಿ ಹೀಗೆ ವಿವಿಧ ರೀತಿಯಲ್ಲಿ ಸರ್ಕಾರವು ಶಿಕ್ಷಕರನ್ನು ಕೊರೊನಾ ನಿಯಂತ್ರಣದ ಕೆಲಸಕ್ಕೆ ನಿಯೋಜಿಸಿತ್ತು.
ಕೋವಿಡ್‌ಗೆ ಸಂಬಂಧಿಸಿದ ಕೆಲಸಗಳಿಗೆ ನಿಯೋಜನೆಯಾದ ಸಂದರ್ಭದಲ್ಲಿ ಸೋಂಕು ತಗುಲಿ ಮೃತಪಟ್ಟರೆ ಅವರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಲಾಗುತ್ತದೆ. ಶಿಕ್ಷಣ ಇಲಾಖೆಯಿಂದ ಅವರ ಕುಟುಂಬಕ್ಕೆ ದೊರೆಯುವ ಸೌಲಭ್ಯಗಳಲ್ಲದೆ ಕೋವಿಡ್ ಕೆಲಸದ ವೇಳೆ ಮರಣ ಹೊಂದಿದರು ಎಂದು ₹ 30 ಲಕ್ಷ ಪರಿಹಾರ ಸಹ ದೊರೆಯುತ್ತದೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟಿರುವ ಶಿಕ್ಷಕರಲ್ಲಿ ಬಹುತೇಕರು ಗ್ರಾಮೀಣ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಮೃತಪಟ್ಟ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದ ಶಾಲೆ: ಚಿಕ್ಕಬಳ್ಳಾಪುರ ತಾಲ್ಲೂಕಿನ ಪೋಶೆಟ್ಟಿಹಳ್ಳಿ, ಕರ್ನಾಟಕ ಪ್ರಾಕ್ಟೀಸಿಂಗ್ ಪ್ರೌಢಶಾಲೆ, ತಿಪ್ಪೇನಹಳ್ಳಿ ಪ್ರೌಢಶಾಲೆ, ಚಿಂತಾಮಣಿ ತಾಲ್ಲೂಕಿನ ಯನಮಲಪಾಡಿ, ಹಿರಣ್ಯಪಲ್ಲಿ, ಮೊಹಮ್ಮದ್ ಪುರ, ನಲಮಾಚನಹಳ್ಳಿ, ಕುರುಬೂರು, ಎಂ.ಗೊಲ್ಲಹಳ್ಳಿ, ಚಿಲಕಲನೇರ್ಪು, ಕಾಗತಿ, ಸಂತೇಕಲ್ಲಹಳ್ಳಿ, ಗೌರಿಬಿದನೂರು ತಾಲ್ಲೂಕಿನ ಹುದಗೂರು, ಮಾವಿನಕಾಯನಹಳ್ಳಿ ಕಾಲೊನಿ, ಶಿಡ್ಲಘಟ್ಟ ತಾಲ್ಲೂಕಿನ ಚೊಕ್ಕನಹಳ್ಳಿ ಕ್ರಾಸ್, ಅಬ್ಲೂಡು, ಬಾಗೇಪಲ್ಲಿ ತಾಲ್ಲೂಕಿನ ಮಾಕಿರೆಡ್ಡಿಪಲ್ಲಿ, ಸೋಮನಾಥಪುರ ಶಾಲೆಯ ಶಿಕ್ಷಕರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
ತಾಲ್ಲೂಕು: ಮೃತ ಶಿಕ್ಷಣ ಇಲಾಖೆ ಸಿಬ್ಬಂದಿ
ಚಿಕ್ಕಬಳ್ಳಾಪುರ; 3
ಚಿಂತಾಮಣಿ; 9
ಶಿಡ್ಲಘಟ್ಟ; 2
ಗೌರಿಬಿದನೂರು; 2
ಬಾಗೇಪಲ್ಲಿ; 2
ಒಟ್ಟು; 18
ಕುಟುಂಬದವರಿಗೆ ಮಾರ್ಗದರ್ಶನ
ಕೋವಿಡ್ ಸೋಂಕಿನಿಂದ ಮೃತಪಟ್ಟ ಶಿಕ್ಷಕರು ಮತ್ತು ಸಿಬ್ಬಂದಿಯ ಕುಟುಂಬ ಸದಸ್ಯರಿಗೆ ಅನುಕಂಪ ಆಧಾರಿತ ಉದ್ಯೋಗ ಮತ್ತು ಇತರೆ ಸೌಲಭ್ಯಗಳು ದೊರೆಯುತ್ತವೆ. ಅವರ ಕುಟುಂಬಕ್ಕೆ ಸೌಲಭ್ಯಗಳನ್ನು ಪಡೆಯುವ ವಿಚಾರವಾಗಿ ನಾವೇ ಖುದ್ದು ಮಾರ್ಗದರ್ಶನ ಮಾಡುತ್ತಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯರಾಮರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಸ್ಥಳೀಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಇಲಾಖೆ ಅಧಿಕಾರಿಗಳು ಅವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅವರು ಸೌಲಭ್ಯಗಳನ್ನು ಪಡೆಯಲು ಎಲ್ಲ ರೀತಿಯ ಸಹಕಾರ ಸಹ ನೀಡುತ್ತಿದ್ದಾರೆ. ಆ ಕುಟುಂಬದವರು ನಮ್ಮನ್ನೂ ಸಹ ಸಂಪರ್ಕಿಸಬಹುದು. ಕೋವಿಡ್ ಕೆಲಸದಲ್ಲಿ ನಿರತ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಅವರ ಕುಟುಂಬಗಳಿಗೆ ಕೋವಿಡ್ ಪರಿಹಾರ ನೀಡಬಹುದು. ತಹಶೀಲ್ದಾರರು ಈ ಬಗ್ಗೆ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವರು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.