ADVERTISEMENT

ಚಿಕ್ಕಬಳ್ಳಾಪುರ | ಕೋವಿಡ್‌ ಮುಕ್ತ ಜಿಲ್ಲೆಯಾಗುವ ಕನಸು ಭಗ್ನ

ಜಿಲ್ಲೆಯಲ್ಲಿ ಮತ್ತೆ ಹೊಸದಾಗಿ ಮೂರು ಪ್ರಕರಣ ವರದಿ, ಹೊಸದಾಗಿ ನೇಮಕಗೊಂಡ ಮಹಿಳಾ ಕಾನ್‌ಸ್ಟೆಬಲ್‌ಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 15:19 IST
Last Updated 17 ಜೂನ್ 2020, 15:19 IST
   

ಚಿಕ್ಕಬಳ್ಳಾಪುರ: ಶೀಘ್ರದಲ್ಲಿಯೇ ಜಿಲ್ಲೆ ಕೋವಿಡ್‌ ಮುಕ್ತ ಎಂದು ಘೋಷಿಸುವ ತರಾತುರಿಯಲ್ಲಿದ್ದ ಜಿಲ್ಲಾಡಳಿತದ ಕನಸು ಬುಧವಾರ ಭಗ್ನಗೊಂಡಿದೆ. ಹೊಸದಾಗಿ ನೇಮಕಾತಿಯಾದ ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರು ಸೇರಿದಂತೆ ಮತ್ತೆ ಮೂರು ಜನರಲ್ಲಿ ಕೋವಿಡ್‌ ದೃಢಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ 152 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ ಮೂರು ಜನರು ಮೃತಪಟ್ಟಿದ್ದರು. 147 ಸೋಂಕಿತರು ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಬ್ಬರು ಮಾತ್ರ ಸದ್ಯ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಧಿಕಾರಿಗಳು ಅವರನ್ನು ಆದಷ್ಟು ಬೇಗ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಆಶಾಭಾವನೆ ವ್ಯಕ್ತಪಡಿಸಿದ್ದರು.

ಆದರೆ, ಬುಧವಾರ ಚಿಂತಾಮಣಿಯ ಮೂಲದ ಹೊಸದಾಗಿ ನೇಮಕಾತಿಯಾಗಿತರಬೇತಿಗೆ ಕಾಯುತ್ತಿದ್ದ 25 ವರ್ಷದ ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರಲ್ಲಿ ಕೋವಿಡ್‌ ಪತ್ತೆಯಾಗಿದ್ದೆ. ನಗರಹೊರವಲಯದ ಅಣಕನೂರಿನಲ್ಲಿ ಇಬ್ಬರು ಸಹದ್ಯೋಗಿಗಳೊಂದಿಗೆ ಈ ಸೋಂಕಿತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ADVERTISEMENT

ಈ ಹಿಂದೆ ಎಸ್ಪಿ ಕಚೇರಿಯ ವೈರಲೆಸ್‌ ವಿಭಾಗದ ಕಾನ್‌ಸ್ಪೆಬಲ್‌ವೊಬ್ಬರು ಕೋವಿಡ್‌ಗೆ ತುತ್ತಾಗಿ, ಚಿಕಿತ್ಸೆಯಿಂದ ಗುಣಮುಖರಾಗಿ ಇತ್ತೀಚೆಗಷ್ಟೇ ಕರ್ತವ್ಯಕ್ಕೆ ಮರಳಿದ್ದರು. ಇದೀಗ ಇಲಾಖೆಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು, ಖಾಕಿ ವಲಯ ಕಂಗೆಡುವಂತೆ ಮಾಡಿದೆ.

ಜತೆಗೆ, ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ 20 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗುವ ಮೂಲಕ ಈವರೆಗೆ ಕೋವಿಡ್‌ ಪ್ರಕರಣಗಳು ವರದಿಯಾಗದೆ ಸಂತಸದಿಂದ ತಾಲ್ಲೂಕಿನಲ್ಲಿ ಕೂಡ ಇದೀಗ ತಲ್ಲಣ ಮೂಡಿದೆ. ಜತೆಗೆ ಮಹಾರಾಷ್ಟ್ರದಿಂದ ವಾಪಾಸಾದ ಗೌರಿಬಿದನೂರಿನ 56 ವರ್ಷದ ಮಹಿಳೆಯೊಬ್ಬರಲ್ಲಿ ಸಹ ಕೋವಿಡ್ ಇರುವುದು ಧೃಢಪಟ್ಟಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 155ಕ್ಕೆ ಏರಿಕೆಯಾಗಿದ್ದು, ಪ್ರಸ್ತುತ ಕೋವಿಡ್‌ ವಾರ್ಡ್‌ನಲ್ಲಿ ಐದು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.