ADVERTISEMENT

ಬಾಗೇಪಲ್ಲಿ: ಜಿ.ವಿ.ಶ್ರೀರಾಮರೆಡ್ಡಿ ನಿಧನ, ಕಂಬನಿ ಮಿಡಿದ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 4:36 IST
Last Updated 16 ಏಪ್ರಿಲ್ 2022, 4:36 IST
ಬಾಗೇಪಲ್ಲಿ ಸರ್ಕಾರಿ ಶಾಲಾವರಣದ ಮುಂದೆ ದಿ. ಜಿ.ವಿ.ಶ್ರೀರಾಮರೆಡ್ಡಿ ಅವರ ಪಾರ್ಥಿವ ಶರೀರದ ವೀಕ್ಷಿಸಲು ತಂಡೋಪತಂಡವಾಗಿ ಜನರು ಸಾಲುಗಟ್ಟಿ ನಿಂತಿದ್ದರು
ಬಾಗೇಪಲ್ಲಿ ಸರ್ಕಾರಿ ಶಾಲಾವರಣದ ಮುಂದೆ ದಿ. ಜಿ.ವಿ.ಶ್ರೀರಾಮರೆಡ್ಡಿ ಅವರ ಪಾರ್ಥಿವ ಶರೀರದ ವೀಕ್ಷಿಸಲು ತಂಡೋಪತಂಡವಾಗಿ ಜನರು ಸಾಲುಗಟ್ಟಿ ನಿಂತಿದ್ದರು   

ಬಾಗೇಪಲ್ಲಿ: ಕ್ಷೇತ್ರದ ಮಾಜಿ ಶಾಸಕ ಹಾಗೂ ಜನಪರ ಹೋರಾಟಗಾರ ಜಿ.ವಿ.ಶ್ರೀರಾಮರೆಡ್ಡಿ ಶುಕ್ರವಾರ ಬೆಳಿಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತ ಹೊಂದಿರುವ ವಿಷಯ ತಿಳಿದ ಜನರು ತಂಡೋಪತಂಡವಾಗಿ ಪಾರ್ಥಿವ ಶರೀರ ದರ್ಶನ ಪಡೆದರು. ನೆಚ್ಚಿನ ನಾಯಕನ ನಿಧನಕ್ಕೆ ಅಭಿಮಾನಿಗಳು ಕಣ್ಣೀರು ಸುರಿಸಿದರು.

ಜಿ.ವಿ.ಶ್ರೀರಾಮರೆಡ್ಡಿ ಅವರಿಗೆ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ನಂತರ ಪಾರ್ಥಿವ ಶರೀರವನ್ನು ಸ್ವಗೃಹದ ಮುಂದೆ ಇರಿಸಲಾಯಿತು. ಜನರು, ಅಭಿಮಾನಿಗಳು, ಮುಖಂಡರು ಆಗಮಿಸಿ ಅಂತಿಮ ದರ್ಶನ ಪಡೆದರು.

ನಂತರ ಪಟ್ಟಣದ ಸುಂದರಯ್ಯ ಭವನದ ಮುಂದೆ ಜಿ.ವಿ.ಶ್ರೀರಾಮರೆಡ್ಡಿ ಅವರ ಪಾರ್ಥಿವ ಶರೀರ ಇರಿಸಿದರು. ತಂಡೋಪತಂಡವಾಗಿ ಜನರು ಆಗಮಿಸಿದ್ದರಿಂದ ಜಾಗದ ಕೊರತೆಯಿಂದ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾವರಣದ ಕನ್ನಡ ಭವನದ ವೇದಿಕೆ ಮೇಲೆ ಪಾರ್ಥಿವ ಶರೀರ ಇರಿಸಲು ವ್ಯವಸ್ಥೆ ಮಾಡಲಾಯಿತು. ಜಿವಿಎಸ್ ಪಾರ್ಥಿವ ಶರೀರಕ್ಕೆ ಕೆಂಬಾವುಟ ಹಾಕಿ ನಮನ ಸಲ್ಲಿಸಲಾಯಿತು. ಸಾರ್ವಜನಿಕರು ಸರತಿಸಾಲಿನಲ್ಲಿ ನಿಂತು ಹೂಮಾಲೆ ಅರ್ಪಿಸಿ, ಅಂತಿಮ ನಮನ ಸಲ್ಲಿಸಿದರು. ಅಗಲಿದ ನಾಯಕರ ಪಾರ್ಥಿವ ಶರೀರದ ಮುಂದೆ ಹಿರಿಯರು-ಕಿರಿಯರು, ಅಭಿಮಾನಿಗಳು ಕಂಬಿನಿ ಮಿಡಿದರು.

ADVERTISEMENT

ಜಿವಿಎಸ್ ಅವರ ಅಂತ್ಯಕ್ರಿಯೆಯನ್ನು ಪಟ್ಟಣದ ಚಿತ್ರಾವತಿ ಏಕೋ ಉದ್ಯಾನದಲ್ಲಿ ಮಾಡುವಂತೆ ಅಭಿಮಾನಿಗಳ, ನಾಯಕರ ಅಭಿಪ್ರಾಯ ಆಗಿತ್ತು. ಆದರೆ ಶ್ರೀರಾಮರೆಡ್ಡಿ ಕುಟುಂಬದವರು ತಮ್ಮ ಸ್ವಗ್ರಾಮ ಚಿಂತಾಮಣಿ ತಾಲ್ಲೂಕಿನ ಬೈರಾಬಂಡ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಹಿರಿಯ ವಕೀಲ ಶಂಕರಪ್ಪ, ಕುಟುಂಬಸ್ಥರು, ನಾಯಕರು ಸಭೆ ನಡೆಸಿದರು.

ಜಿವಿಎಸ್ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡುವ ವಿಷಯ ತಿಳಿದ ಅಭಿಮಾನಿಗಳು ತಾಲ್ಲೂಕಿನಲ್ಲಿ ಅಂತ್ಯಕ್ರಿಯೆ ಮಾಡಲೇಬೇಕು ಎಂದು ಘೋಷಣೆ ಕೂಗಿದರು. ಇದರಿಂದ ಕೆಲ ಕಾಲ ಗೊಂದಲ ಮೂಡಿತ್ತು. ಜಿವಿಎಸ್ ಕಲಿಸಿರುವ ಶಿಸ್ತನ್ನು ಪಾಲಿಸಿ, ಗೊಂದಲ ಮೂಡಿಸುವುದು ಬೇಡ ಎಂದು ಮುಖಂಡರು ಮನವಿ ಮಾಡಿದರು.

ಸಂಜೆ 6 ಗಂಟೆಗೆ ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾವರಣದಿಂದ, ಸುಂದರಯ್ಯ ಭವನದವರಿಗೂ ಪಾರ್ಥಿವ ಶರೀರದೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಮುಖಂಡರು ಮೆರವಣಿಗೆ ಮಾಡಿದರು. ಪಟ್ಟಣದಲ್ಲಿ ನೀರವ
ಮೌನ ಆವರಿಸಿತ್ತು.

ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಡಿವೈಎಸ್‌ಪಿ ವಾಸುದೇವ್, ತಹಶೀಲ್ದಾರ್ ವೈ.ರವಿ, ಗುಡಿಬಂಡೆ ತಹಶೀಲ್ದಾರ್ ಸಿಗ್‌ಬತ್‌ ಉಲ್ಲಾ, ಗೂಳೂರು ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ಚನ್ನಭದ್ರ ವೀರಮಲ್ಲಸ್ವಾಮೀಜಿ, ಮಾಜಿ ಸ್ವೀಕರ್ ರಮೇಶ್ ಕುಮಾರ್‌, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ, ಮಾಜಿ ಶಾಸಕ ಎನ್.ಸಂಪಂಗಿ, ಚಿಂತಾಮಣಿ ಮಾಜಿ ಶಾಸಕ ಸುಧಾಕರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಕೇಶವರರೆಡ್ಡಿ, ಮುಖಂಡ ಗುಂಜೂರು ಶ್ರೀನಿವಾಸರೆಡ್ಡಿ, ಅರೆಕೆರೆ ಕೃಷ್ಣಾರೆಡ್ಡಿ, ಸಿಪಿಎಂ ಪಕ್ಷದ ಕೇಂದ್ರ ಸಮಿತಿ ಸದಸ್ಯ ಕೆ.ಎನ್‌. ಉಮೇಶ್, ಮುಖಂಡ ವಿಜೆಕೆ ನಾಯಕರ್ ಸೇರಿದಂತೆ ಗಣ್ಯರು ಮಾಜಿ ಶಾಸಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿರವರ ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.