ADVERTISEMENT

ದೇವಾಲಯಗಳಲ್ಲಿ ಜನಸಾಗರ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 2:38 IST
Last Updated 12 ಮಾರ್ಚ್ 2021, 2:38 IST
ಚಿಂತಾಮಣಿ ತಾಲ್ಲೂಕಿನ ಕೈವಾರದ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರು
ಚಿಂತಾಮಣಿ ತಾಲ್ಲೂಕಿನ ಕೈವಾರದ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರು   

ಚಿಂತಾಮಣಿ: ತಾಲ್ಲೂಕಿನಾದ್ಯಂತ ಗುರುವಾರ ಮಹಾಶಿವರಾತ್ರಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು. ದೇವಾಲಯಗಳಿಗೆ ಜನಸಾಗರವೇ ಹರಿದು ಬಂದಿತ್ತು. ಮಧ್ಯಾಹ್ನದ ನಂತರ ನಗರದಲ್ಲಿ ಜನಸಂಚಾರವೇ ವಿರಳವಾಗಿತ್ತು.

ಕೈವಾರದ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯ ಗಳನ್ನು ಹಮ್ಮಿಕೊಳ್ಳಲಾಗಿತ್ತು. ಭೀಮ ಲಿಂಗೇಶ್ವರ ಲಿಂಗಕ್ಕೆ ಮಹನ್ಯಾಸಪೂರ್ವಕ ರುದ್ರಾಭಿಷೇಕವನ್ನು ಅರ್ಪಿಸಲಾಯಿತು. ಪಾರ್ವತೀ ಅಮ್ಮನವರಿಗೆ ವಿಶೇಷ ಅಭಿಷೇಕ ಲಲಿತಾ ಸಹಸ್ರ ನಾಮಾರ್ಚನೆಯನ್ನು ಮಾಡಲಾಯಿತು. ಭಕ್ತರು ಪುರಾತನವಾದ ಈ ದೇವಾಲಯ
ದಲ್ಲಿರುವ ನಂದಿಯನ್ನು ಪೂಜಿಸಿದರು.

ತಾತಯ್ಯನವರ ಮೂಲ ಬೃಂದಾವನವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು. ನಾದಸುಧಾರಸ ವೇದಿಕೆಯನ್ನು ಬೆಳಗಿನಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ADVERTISEMENT

ಅಜಾದ್ಚೌಕ: ನಗರದ ಅಜಾದ್ಚೌಕದ ಹರಿಹರೇಶ್ವರಸ್ವಾಮಿ ದೇವಾಲಯದಲ್ಲಿ ಉಮಾ ಮಹೇಶ್ವರಿಸ್ವಾಮಿಗೆ ವಿಶೇಷ ಅಲಂಕಾರ, ಪೂಜೆಯನ್ನು ಏರ್ಪಡಿಸಲಾಗಿತ್ತು. ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ಕ್ಷೀರಾಭಿಷೇಕ, ನಂತರ ರುದ್ರಾಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. 3.30 ಗಂಟೆಗೆ ಗಿರಿಜಾ ಕಲ್ಯಾಣೋತ್ಸವ ನೆರವೇರಿತು.

ನಾರಸಿಂಹಪೇಟೆ: ನಗರದ ನಾರಸಿಂಹ ಪೇಟೆಯ ವೀರಾಂಜನೇಯಸ್ವಾಮಿ ಮತ್ತು ಪಾರ್ವತಿ ಸಮೇತ ಸುಂದರೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿವಿಧ ಶಿವಲಿಂಗಗಳ ದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ಯಕಾ ಪರಮೇಶ್ವರಿ: ನಗರದ ಎನ್.ಆರ್. ಬಡಾವಣೆಯ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲೂ ಶಿವರಾತ್ರಿ ಪ್ರಯುಕ್ತ ವಿಶೇಷ ಅಲಂಕಾರ, ಪೂಜೆ, ಕ್ಷೀರಾಭಿಷೇಕ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು.

ಮುರುಗಮಲ್ಲ: ಮುರುಗಮಲ್ಲ ಬೆಟ್ಟದ ಮುಕ್ತೀಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿಯ ಅಂಗವಾಗಿ ಜಾತ್ರೆಯಂತೆ ಜನಜಂಗುಳಿ ಸೇರಿದ್ದರು. ಉಪವಾಸ ನಿರತ ಭಕ್ತರಿಗೆ ಫಲಹಾರದ ವ್ಯವಸ್ಥೆ ಮಾಡಲಾಗಿತ್ತು.

ಮಹಾಕೈಲಾಸಗಿರಿ: ಅಂಬಾಜಿದುರ್ಗಾ ಬೆಟ್ಟದ ತಪ್ಪಲಲ್ಲಿರುವ ಮಹಾ ಕೈಲಾಸಗಿರಿಯಲ್ಲಿ ಗಂಗಾಧರೇಶ್ವರ ಸೇವಾ ಟ್ರಸ್ಟಿನಿಂದ ಶತರುದ್ರಾಭಿಷೇಕ, ಹೋಮ, ಗಿರಿಜಾ ಕಲ್ಯಾಣೋತ್ಸವ ಹಮ್ಮಿ ಕೊಳ್ಳಲಾಗಿತ್ತು. ಕೈಲಾಸಗಿರಿಯಲ್ಲಿರುವ ವಲ್ಲಭ ಗಣಪತಿ ಜಗನ್ನಾಥಸಮೇತ ಚತುರ್ಮುಖ ಲಿಂಗೇಶ್ವರಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಅಭಿಷೇಕ, ಅರ್ಚನೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.