ADVERTISEMENT

ಕ್ಯಾಂಪಸ್‌ ತುಂಬಾ ಸಾಂಪ್ರದಾಯದ ರಂಗು

ಎಸ್‌ಜೆಸಿಐಟಿ ಕ್ಯಾಂಪಸ್‌ನಲ್ಲಿ ಬಿಜಿಎಸ್‌ ನಿರ್ವಹಣಾ ಅಧ್ಯಯನ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಉಡುಗೆ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 12:52 IST
Last Updated 5 ಅಕ್ಟೋಬರ್ 2019, 12:52 IST
ಸಾಂಪ್ರದಾಯಿಕ ಉಡುಗೆ ಧರಿಸಿದ ಬಂದ ವಿದ್ಯಾರ್ಥಿಗಳು, ಉಪನ್ಯಾಸಕರೊಂದಿಗೆ ಮಂಗಳಾನಂದನಾಥ ಸ್ವಾಮೀಜಿ
ಸಾಂಪ್ರದಾಯಿಕ ಉಡುಗೆ ಧರಿಸಿದ ಬಂದ ವಿದ್ಯಾರ್ಥಿಗಳು, ಉಪನ್ಯಾಸಕರೊಂದಿಗೆ ಮಂಗಳಾನಂದನಾಥ ಸ್ವಾಮೀಜಿ   

ಚಿಕ್ಕಬಳ್ಳಾಪುರ: ನಿತ್ಯ ಸಮವಸ್ತ್ರ ಧರಿಸಿ, ಆಗಾಗ ಜೀನ್ಸ್‌, ಟಿಶರ್ಟ್‌ನಂತಹ ಫ್ಯಾಷನ್‌ ಉಡುಗೆಗಳನ್ನು ತೊಟ್ಟವರಿಂದ ತುಂಬಿರುತ್ತಿದ್ದ ಆ ಆವರಣದಲ್ಲಿ ಬುಧವಾರ ಏಕಾಏಕಿ ಪಂಚೆ, ಸೀರೆ ತೊಟ್ಟು ಬಂದವರ ಕಲರವ ಮನೆ ಮಾಡಿತ್ತು. ಸಂಪ್ರದಾಯಸ್ಥರ ವೇಷದಲ್ಲಿ ಬಂದವರು ಮೋಜಿನ ಕಿಲಕಿಲ ಮುಗಿಲು ಮುಟ್ಟಿತ್ತು. ಬಣ್ಣಬಣ್ಣದ ರಂಗೋಲಿಗಳಿಂದಾಗಿ ಅಲ್ಲಿ ಊರಹಬ್ಬದ ಸಡಗರ ಮನೆ ಮಾಡಿತ್ತು.

ನಗರ ಹೊರವಲಯದ ಶ್ರೀ ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆಯ (ಎಸ್‌ಜೆಸಿಐಟಿ) ಕ್ಯಾಂಪಸ್‌ನಲ್ಲಿ ಶನಿವಾರ ಬಿಜಿಎಸ್‌ ನಿರ್ವಹಣಾ ಅಧ್ಯಯನ ಸಂಸ್ಥೆ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಉಡುಗೆ ದಿನ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.

ಅಪ್ಪಟ ಗ್ರಾಮೀಣ ಉಡುಗೆ ತೊಡುಗೆ ಎನಿಸಿಕೊಂಡ ಧೋತರ, ಪಂಚೆ, ಜುಬ್ಬಾ, ಲಂಗ ದಾವಣಿ, ಸೀರೆ ತೊಟ್ಟು ಬಂದಿದ್ದ ವಿದ್ಯಾರ್ಥಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ವಿದ್ಯಾರ್ಥಿನಿಯರಂತೂ ವಿವಿಧ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಸೀರೆಗಳನ್ನು ಉಟ್ಟು ಬಂದು ಕ್ಯಾಂಪಸ್‌ಗೆ ವೈವಿಧ್ಯಮಯ ರಂಗು ತುಂಬಿದ್ದರು.

ADVERTISEMENT

ರೇಷ್ಮೆ ಸೀರೆ ಉಟ್ಟು, ಬಗೆ ಬಗೆಯ ಆಭರಣ ತೊಟ್ಟು ಬಂದವರಿಗೆ ಗೆಳತಿಯರೊಂದಿಗೆ ಎಷ್ಟು ‘ಸೆಲ್ಫಿ’ ತೆಗೆದುಕೊಂಡರೂ ಸಮಾಧಾನವಿಲ್ಲ. ಪಂಚೆ ತೊಟ್ಟವರು ಕೂಡ ತಾವೇನೂ ಕಡಿಮೆ ಎನ್ನುವಂತೆ ಮೊಬೈಲ್ ಸ್ವಂತಿಗೆ ಮುಗುಳುನಗೆ ಬೀರುತ್ತಿದ್ದರು.

ಬಿಬಿಎ, ಬಿ.ಕಾಂ ಹಾಗೂ ಎಂ.ಕಾಂ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೊಗಡಿನ ಕ್ರೀಡೆಗಳಾದ ಅಳಗುಳಿಮನೆ, ಚೌಕಾಬಾರ, ಲಗೋರಿ, ಮಡಕೆ ಒಡೆಯುವುದು ಸ್ಪರ್ಧೆಗಳ ಜತೆಗೆ, ಗಾಯನ, ರಂಗೋಲಿ, ಮದರಂಗಿ, ಫ್ಯಾಷನ್‌ ಶೋ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು. ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿ, ನೃತ್ಯ ಮಾಡಿ ಸಂಭ್ರಮಿಸಿ ಕೇಕೆ ಹಾಕಿದ ಸಂಭ್ರಮಿಸಿದ ವಿದ್ಯಾರ್ಥಿಗಳ ಸಂತಸಕ್ಕೆ ಪಾರವೇ ಇರಲಿಲ್ಲ.

ಕಾರ್ಯಕ್ರಮದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ‘ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರೆ, ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಹೊಸ ತಲೆಮಾರುಗಳಲ್ಲಿ ಪ್ರವಹಿಸುವ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿವೆ. ಬಿಜಿಎಸ್ ಎಂದರೆ ಜ್ಞಾನದ ಹೂಗಳು ಅರಳುವ ತೋಟ ಇದ್ದಂತೆ’ ಎಂದು ಅಭಿಪ್ರಾಯಪಟ್ಟರು.

ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ಪಾಮೀಜಿ, ಇಂಡಿಯನ್ ಮೆಮೊರಿ ಕೌನ್ಸಿಲ್ ಅಧ್ಯಕ್ಷ ಜಯಸಿಂಹ, ಪ್ರಾಂಶುಪಾಲ ವೆಂಕಟೇಶ್ ಬಾಬು ಹಾಗೂ ಡೀನ್ ದೊಡ್ಡೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.