ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ದವಾ–ದುವಾ (ಮಾನಸಿಕ ಆರೋಗ್ಯ ಸಮಾಲೋಚನಾ ಮತ್ತು ಚಿಕಿತ್ಸಾ ಕೇಂದ್ರ) ಆಸ್ಪತ್ರೆ ಉದ್ಘಾಟನೆಯಾಗಿ ಒಂದು ವರ್ಷ ಪೂರ್ಣವಾಗಿದೆ. ಆದರೆ, ಈ ಆಸ್ಪತ್ರೆಗೆ ಕಾಯಂ ವೈದ್ಯರು ಮತ್ತು ಸಿಬ್ಬಂದಿ ನೇಮಕಾತಿ ಮಾತ್ರ ಇನ್ನೂ ಆಗಿಲ್ಲ.
ವಾರಕ್ಕೆ ಎರಡು ದಿನ ಮಾತ್ರ ಚಿಕ್ಕಬಳ್ಳಾಪುರದಿಂದ ವೈದ್ಯರು ಬಂದು ಹೋಗುತ್ತಾರೆ. ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದ ಕಾರಣ ಈ ಆಸ್ಪತ್ರೆಯು ರೋಗಿಗಳ ಉಪಯೋಗಕ್ಕೆ ಬಾರದಂತಾಗಿದೆ.
ಹಿಂದೂ–ಮುಸ್ಲಿಂ ಭಾವೈಕ್ಯತೆಯ ಕೇಂದ್ರ ಮುರುಗಮಲ್ಲದಲ್ಲಿ ಇಡೀ ದಕ್ಷಿಣ ಭಾರತದಲ್ಲೇ ಪ್ರಸಿದ್ದವಾದ ಹಜರತ್ ಅಮ್ಮಜಾನ್ ಬಾವಾಜಾನ್ ದರ್ಗಾ ಇದೆ. ಈ ಭಾಗದ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ವಕ್ಫ್ ಮಂಡಳಿ ವತಿಯಿಂದ ₹2 ಕೋಟಿ ವೆಚ್ಚದಲ್ಲಿ ದರ್ಗಾಒ ಆವರಣದಲ್ಲಿ ಸುಸಜ್ಜಿತ ದವಾ–ದುವಾ ಆಸ್ಪತ್ರೆ ಸ್ಥಾಪಿಸಲಾಗಿದೆ. ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿದಂತೆ ಇತರರು ಒಂದು ವರ್ಷದ ಹಿಂದೆಯೇ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಇದರಿಂದ ಗ್ರಾಮಸ್ಥರು ಮತ್ತು ಜನಸಾಮಾನ್ಯರಿಗೆ ಸಂತಸವಾಗಿತ್ತು. ಆದರೆ, ಆ ಸಂತಸ ಹೆಚ್ಚು ದಿನ ಉಳಿಯಲಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ಆಸ್ಪತ್ರೆಗೆ ಈವರೆಗೆ ಕಾಯಂ ವೈದ್ಯರು ಮಮತ್ತು ಸಿಬ್ಬಂದಿ ನೇಮಕವಾಗಿಲ್ಲ. ಹೀಗಾಗಿ, ಪ್ರತಿನಿತ್ಯ ಆಸ್ಪತ್ರೆ ಬಾಗಿಲನ್ನು ಸಹ ತೆರೆಯುವುದಿಲ್ಲ. ಪ್ರತಿ ಸೋಮವಾರ ಲಾವಣ್ಯ ಮತ್ತು ಬುಧವಾರ ಹೇಮಂತ್ ಎಂಬ ಇಬ್ಬರು ವೈದ್ಯರು ಬಂದು ಹೋಗುತ್ತಾರೆ. ಇದರಿಂದ ಆಸ್ಪತ್ರೆ ಸ್ಥಾಪನೆ ಉದ್ದೇಶವೇ ವಿಫಲವಾಗಿದೆ ಎನ್ನುತ್ತಾರೆ ದರ್ಗಾ ಸಮಿತಿಯ ಮಾಜಿ ಕಾರ್ಯದರ್ಶಿ ಆರೀಫ್ ಖಾನ್.
ದರ್ಗಾಕ್ಕೆ ಬರುವ ಮಾನಸಿಕ ಅಸ್ವಸ್ಥರು ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಿಗೆ ಅನುಕೂಲವಾಗುತ್ತಿಲ್ಲ. ಇದರಿಂದಾಗಿ ₹2 ಕೋಟಿ ಸಾರ್ವಜನಿಕ ಹಣ ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದಂತಾಗಿದೆ ಎಂದು ದರ್ಗಾ ಭಕ್ತರು ದೂರುತ್ತಾರೆ.
ಮಾನಸಿಕ ವೈದ್ಯರು ಒಂದೊಂದು ದಿನ ಒಂದೊಂದು ಕಡೆ ಇಡೀ ಜಿಲ್ಲೆಯಲ್ಲಿ ಕೆಲಸ ಮಾಡಬೇಕು. ವಾರದಲ್ಲಿ ಸೋಮವಾರ ಮತ್ತು ಬುಧವಾರ ಮಾತ್ರ ಆಸ್ಪತ್ರೆ ಬಾಗಿಲು ತೆರೆಯಲಾಗುತ್ತದೆ. ಬೇರೆ ಬೇರೆ ಕಾರಣಗಳಿಂದ ಮಾನಸಿಕ ವೈದ್ಯರು ಬರದಿದ್ದರೆ, ಗ್ರಾಮದ ಸರ್ಕಾರಿ ಆಸ್ಪತ್ರೆ ವೈದ್ಯರೇ ಅಲ್ಲಿ ನಿರ್ವಹಣೆ ಮಾಡುತ್ತಾರೆ. ಚೀಟಿಯಲ್ಲಿ ರೋಗಿಯ ಹೆಸರು ಬರೆದು ಬೇರೆಡೆಗೆ ಕಳುಹಿಸುವುದಷ್ಟೇ ಅವರ ಕೆಲಸ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಆಸ್ಪತ್ರಗೆ ಪೂರೈಕೆಯಾಗಿರುವ ಬೆಡ್ ಮತ್ತು ಇತರೆ ಪರಿಕರಗಳು ಈವರೆಗೆ ಬಳಕೆಯೇ ಆಗಿಲ್ಲ. ಅವುಗಳ ಮೇಲೆ ಹೊದಿಸಲಾಗಿರುವ ಕವರ್ ಅನ್ನೂ ಈವರೆಗೆ ತೆಗೆದಿಲ್ಲ. ಕ್ಯಾಂಪ್ ರೀತಿ ಎರಡು ದಿನ ವೈದ್ಯರು ಕಾರ್ಯನಿರ್ವಹಿಸುವುದಾದರೆ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬಹುದಿತ್ತು. ಹೊಸ ಆಸ್ಪತ್ರೆ ಕಟ್ಟಡ ಕಟ್ಟುವ ಅಗತ್ಯವೇನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.
₹2 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಉದ್ಘಾಟನೆಯಾಗಿ ವರ್ಷವಾದ್ರೂ ಇಲ್ಲ ಕಾಯಂ ವೈದ್ಯರು ವಾರಕ್ಕೆ 2 ದಿನ ಮಾತ್ರ ತೆರೆಯುವ ಆಸ್ಪತ್ರೆ
ಮಾನಸಿಕ ರೋಗಿಗಳಿಗಾಗಿಯೇ ಆಸ್ಪತ್ರೆ ನಿರ್ಮಿಸಲಾಗಿದೆ. ಕ್ಯಾಂಪ್ ರೀತಿ ವಾರಕ್ಕೆ ಎರಡು ದಿನ ವೈದ್ಯರು ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಾರೆ. ಶೀಘ್ರವೇ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ–ಡಾ. ಮುನಿಸ್ವಾಮಿರೆಡ್ಡಿ ಆಸ್ಪತ್ರೆ ವೈದ್ಯಾಧಿಕಾರಿ
ಮುರುಗಮಲ್ಲದಲ್ಲಿರುವ ದವಾ–ದುವಾ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸಬೇಕು. ಆಗ ಪೂರ್ಣ ಪ್ರಮಾಣದಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುವುದು ಸಾಧ್ಯವಾಗಲಿದೆ–ಇಮ್ರಾನ್ ಖಾನ್ , ಮುರುಗಮಲ್ಲ ನಿವಾಸಿ ಚಿಂತಾಮಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.