ADVERTISEMENT

ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆಗೆ ಕಡಿವಾಣ : ಮಳಿಗೆಗಳ ಮೇಲೆ ಆಯುಕ್ತರ ದಾಳಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 15:09 IST
Last Updated 22 ಆಗಸ್ಟ್ 2018, 15:09 IST
ನಗರದ ಭುವನೇಶ್ವರಿ ವೃತ್ತದಲ್ಲಿರುವ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಪರಿಶೀಲಿಸಿದ ನಗರಸಭೆ ಆಯುಕ್ತ ಉಮಾಕಾಂತ್
ನಗರದ ಭುವನೇಶ್ವರಿ ವೃತ್ತದಲ್ಲಿರುವ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಪರಿಶೀಲಿಸಿದ ನಗರಸಭೆ ಆಯುಕ್ತ ಉಮಾಕಾಂತ್   

ಚಿಕ್ಕಬಳ್ಳಾಪುರ: ಪರಿಸರಕ್ಕೆ ಹಾನಿ ಉಂಟು ಮಾಡುವ ನಿಷೇಧಿತ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆಗೆ ಕಡಿವಾಣ ಹಾಕಲು ಮುಂದಾಗಿರುವ ನಗರಸಭೆ ಆಯುಕ್ತರು ಬುಧವಾರ ನಗರದ ವಿವಿಧೆಡೆ ಮಳಿಗೆಗಳ ಮೇಲೆ ದಿಢೀರ್ ದಾಳಿ ಮಾಡಿ 9 ಕೆ.ಜಿಯಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದರು.

ಭುವನೇಶ್ವರಿ ವೃತ್ತ, ಬಜಾರ್ ರಸ್ತೆ, ಸಂತೆ ಮಾರುಕಟ್ಟೆ ಪ್ರದೇಶದಲ್ಲಿರುವ ದಿನಸಿ ಮಳಿಗೆ, ಹೋಟೆಲ್‌ಗಳನ್ನು ಪರಿಶೀಲಿಸಿದ ಆಯುಕ್ತರು ಕಳಪೆ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸದಂತೆ ತಾಕೀತು ಮಾಡಿದರು.

‘ಸದ್ಯ ದಾಸ್ತಾನು ಇರುವ ಪ್ಲಾಸ್ಟಿಕ್ ಆದಷ್ಟು ಬೇಗ ಖಾಲಿ ಮಾಡಬೇಕು. ಸೆಪ್ಟೆಂಬರ್ 1ರ ನಂತರ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ’ ಎಂದರು.

ADVERTISEMENT

‘ನಗರಸಭೆ ಆವರಣದಲ್ಲಿ ಪ್ಲಾಸ್ಟಿಕ್ ಸ್ವೀಕರಣಾ ಕೇಂದ್ರವೊಂದನ್ನು ತೆರೆಯಲಾಗುತ್ತದೆ. ಅಲ್ಲಿ ವರ್ತಕರು ತಮ್ಮಲ್ಲಿರುವ ನಿಷೇಧಿತ ಪ್ಲಾಸ್ಟಿಕ್‌ ಬ್ಯಾಗ್‌ಗಳು, ವಸ್ತುಗಳನ್ನು ತಂದು ಕೊಡಬಹುದು. ಬಚ್ಚಿಟ್ಟುಕೊಂಡು ಬಳಸುವವರ ಮಳಿಗೆ ಮೇಲೆ ದಾಳಿ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ನಗರದಲ್ಲಿರುವ ಪ್ರತಿಯೊಬ್ಬ ವ್ಯಾಪಾರಿಗಳು ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ನಗರಸಭೆಗೆ ಸಹಕಾರ ನೀಡಬೇಕು. ಪ್ರತಿಯೊಬ್ಬರೂ ಇನ್ನು ಮುಂದೆ 40 ಮೈಕ್ರಾನ್‌ಗಿಂತಲೂ ಕಡಿಮೆ ಇರುವ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಪರಿಸರ ರಕ್ಷಣೆ ಮತ್ತು ನಗರದ ಸ್ವಚ್ಛತೆ ದೃಷ್ಟಿಯಿಂದ ವರ್ತಕರ ಸಹಕಾರ ತುಂಬಾ ಮುಖ್ಯವಾಗಿದೆ’ ಎಂದು ತಿಳಿಸಿದರು. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಾಥ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.