ADVERTISEMENT

ಸಂಭ್ರಮದೊಂದಿಗೆ ಬೆಳಕಿನ ಹಬ್ಬ ಆಚರಣೆ

ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ಸಡಗರ l ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ l ವಿದ್ಯುತ್‌ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 5:06 IST
Last Updated 16 ನವೆಂಬರ್ 2020, 5:06 IST
ಚಿಕ್ಕಬಳ್ಳಾಪುರದ ಗಂಗಮ್ಮ ಗುಡಿ ರಸ್ತೆಯ ಜಾಲಾರಿ ಗಂಗಮಾಂಭ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಸರದಿಯಲ್ಲಿ ನಿಂತ ಮಹಿಳೆಯರು
ಚಿಕ್ಕಬಳ್ಳಾಪುರದ ಗಂಗಮ್ಮ ಗುಡಿ ರಸ್ತೆಯ ಜಾಲಾರಿ ಗಂಗಮಾಂಭ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಸರದಿಯಲ್ಲಿ ನಿಂತ ಮಹಿಳೆಯರು   

ಚಿಕ್ಕಬಳ್ಳಾಪುರ: ಕೋವಿಡ್‌ ಭೀತಿಯ ನಡುವೆಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಜನರು ಜಿಲ್ಲೆಯಾದ್ಯಂತ ಭಾನುವಾರ ಸಡಗರದಿಂದ ಆಚರಿಸಿದರು.

ಹಬ್ಬದ ಪ್ರಯುಕ್ತ ಮಹಿಳೆಯರು, ಮಕ್ಕಳು ಸೂರ್ಯೋದಯಕ್ಕೂ ಮುನ್ನವೇ ಎದ್ದು ಅಭ್ಯಂಜನ ಮುಗಿಸಿ ಹೊಸ ಬಟ್ಟೆ ಧರಿಸಿ ದೇವಾಲಯಗಳಲ್ಲಿ ನೋಮು ಪೂಜೆ ಸಲ್ಲಿಸಿದರು. ಜತೆಗೆ, ವಾಹನಗಳಿಗೂ ಪೂಜೆ ನೆರವೇರಿಸಿದರು.

ನಗರದ ಜಾಲಾರಿ ಗಂಗಾಮಾಂಭ–ಈಶ್ವರ ದೇಗುಲ, ರಾಘವೇಂದ್ರಸ್ವಾಮಿ ಮಠ, ಶಿರಡಿ ಸಾಯಿ­ಬಾಬಾ ಮಂದಿರದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಹೊಸ ಮೊರದಲ್ಲಿ ನೋಮುದಾರ, ಗೆಜ್ಜೆಮುಡಿ, ತೆಂಗಿನಕಾಯಿ, ಅರಿಸಿನ ಕೊಂಬು, ಒಣ ಕೊಬ್ಬರಿ, ಅಡಿಕೆ, ವೀಳ್ಯದೆಲೆ, ಬಾಳೆಹಣ್ಣು, ಬಳೆ ಜತೆಗೆ ಕಜ್ಜಾಯ ಇಟ್ಟುಕೊಂಡು ಹೆಣ್ಣುಮಕ್ಕಳು ದೇವಸ್ಥಾನದತ್ತ ಸಾಗುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯುತ್ತಿತ್ತು.

ADVERTISEMENT

ಹಳೆಯ ನೋಮುದಾರವನ್ನು ದೇವಸ್ಥಾನದ ಬಳಿ ಇಟ್ಟು, ಹೊಸ ದಾರದೊಂದಿಗೆ ಮನೆಗೆ ಹಿಂದಿರುಗಿ ಕುಟುಂಬದ ಸದಸ್ಯರೆಲ್ಲ ಕೈಗೆ ನೋಮುದಾರ ಕಟ್ಟಿಕೊಳ್ಳುವುದು ಸಂಪ್ರದಾಯ.

ನಗರದ ಗಲ್ಲಿಗಳಲ್ಲಿ ಮನೆಗಳ ಮುಂದೆ ರಂಗೋಲಿಯ ಚಿತ್ತಾರ ಕಂಡುಬಂದವು. ಬಡಾವಣೆಗಳ ಮಹಿಳೆಯರು ಸ್ಪರ್ಧೆಗೆ ಇಳಿದಂತೆ ತಮ್ಮ ತಮ್ಮ ಮನೆಗಳ ಮುಂದೆ ಆಕರ್ಷಕ ರಂಗೋಲಿ ಹಾಕಿ ಸಂಜೆ ವೇಳೆಗೆ ಅವುಗಳ ಮಧ್ಯೆ ದೀಪಾಲಂಕಾರ ಮಾಡಿದ್ದರು.

ಮನೆಗಳಲ್ಲೂ ಲಕ್ಷ್ಮಿದೇವಿಗೆ ಪೂಜೆ ಸಲ್ಲಿಸಿ ಹೋಳಿಗೆ, ಕರ್ಜಿಕಾಯಿ, ಚಕ್ಕುಲಿ ಹಾಗೂ ಶಂಕರಪೋಳೆ ಮಾಡಿ ದೇವರಿಗೆ ಸಮರ್ಪಿಸಿದರು. ಪ್ರತಿಯೊಂದು ಮನೆಯ ಮುಂದೆ ವಿವಿಧ ವಿನ್ಯಾಸಗಳ ಆಕಾಶಬುಟ್ಟಿಗಳನ್ನು ತೂಗು ಹಾಕಲಾಗಿತ್ತು. ಮಕ್ಕಳು ಓಣಿ ತುಂಬ ಓಡಾಡಿ ಸಂಭ್ರಮಿಸಿದರು.ದೀಪಾವಳಿ ಪ್ರಯುಕ್ತ ಮನೆಗಳ ಆವರಣದಲ್ಲಿ ಹಣತೆಗಳು ಬೆಳಕು ಚೆಲ್ಲಿದರೆ, ಮಾರುಕಟ್ಟೆ ಪ್ರದೇಶದಲ್ಲಿನ ಮಳಿಗೆಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳು ಝಗಮಗಿಸಿದವು. ದೇವರ ಸಮ್ಮುಖದಲ್ಲಿ ಹಣತೆಗಳಲ್ಲಿ ಎಣ್ಣೆ ದೀಪ ಹಾಗೂ ಮೇಣದ ದೀಪ ಬೆಳಗಲಾಯಿತು. ಕೆಲವರು ವಿಗ್ರಹಕ್ಕೆ ಅರಿಸಿನ ಮತ್ತು ಕುಂಕುಮದ ತಿಲಕಗಳನ್ನಿರಿಸಿ ಅಕ್ಕಿಕಾಳುಗಳನ್ನು ಅರ್ಪಿಸಿ, ಊದುಬತ್ತಿ ಮತ್ತು ಧೂಪಗಳನ್ನೂ ಹಚ್ಚಿ ವಾತಾವರಣವನ್ನು ಪಾವನವಾಗಿಸಿದರು. ನಂತರ ಲಕ್ಷ್ಮಿಯನ್ನು ಪೂಜಿಸಿ ಮನೆ ಮತ್ತು ವ್ಯಾಪಾರದಲ್ಲಿ ಪ್ರಗತಿ, ಶಾಂತಿ, ಧನಾಗ ಮನ ಅಪೇಕ್ಷಿಸಿ ಪ್ರಾರ್ಥನೆ ಸಲ್ಲಿಸಿದರು.

ಹಬ್ಬದ ಪ್ರಯುಕ್ತ ಮನೆಗಳಲ್ಲಿ ಕಜ್ಜಾಯ, ಹುಗ್ಗಿ ಅನ್ನ, ಅಕ್ಕಿ ಪಾಯಸದ ಅಡುಗೆ ಮಾಡಲಾಗಿತ್ತು. ಮನೆಮಂದಿಯೆಲ್ಲರೂ ಒಟ್ಟಿಗೆ ಕುಳಿತು ಭೋಜನ ಸವಿದು ಸಂಭ್ರಮಿಸಿದರು. ಸಂಜೆ ಮಕ್ಕಳು ಪಟಾಕಿ ಸಿಡಿಸಿದರೆ, ಮಹಿಳೆಯರು ಮನೆ ಮುಂದೆ ದೀಪ ಬೆಳಗಿಸಿ ಹಬ್ಬಕ್ಕೆ ಮೆರುಗು ನೀಡಿದರು.

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಎದುರು ಹಸಿರು ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.