ADVERTISEMENT

ದೇಗುಲಗಳಲ್ಲಿ ದೀಪೋತ್ಸವದ ವೈಭವ

ಕಡೇ ಕಾರ್ತಿಕ ಸೋಮವಾರ; ದೇವಸ್ಥಾನಗಳಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 15:58 IST
Last Updated 11 ಡಿಸೆಂಬರ್ 2023, 15:58 IST
ಚಿಕ್ಕಬಳ್ಳಾಪುರದ ಎಚ್‌.ಎಸ್.ಗಾರ್ಡನ್‌ನ ಶನೈಶ್ವರ, ಸುಬ್ರಹ್ಮಣ್ಯ ಸ್ವಾಮಿ ಮತ್ತು ಶಿರಡಿ ಸಾಯಿಬಾಬಾದೇಗುಲದ ಆವರಣದಲ್ಲಿ ಹೆಣ್ಣು ಮಕ್ಕಳು ದೀಪಗಳನ್ನು ಹಚ್ಚಿದರು
ಚಿಕ್ಕಬಳ್ಳಾಪುರದ ಎಚ್‌.ಎಸ್.ಗಾರ್ಡನ್‌ನ ಶನೈಶ್ವರ, ಸುಬ್ರಹ್ಮಣ್ಯ ಸ್ವಾಮಿ ಮತ್ತು ಶಿರಡಿ ಸಾಯಿಬಾಬಾದೇಗುಲದ ಆವರಣದಲ್ಲಿ ಹೆಣ್ಣು ಮಕ್ಕಳು ದೀಪಗಳನ್ನು ಹಚ್ಚಿದರು   

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಕಡೇ ಕಾರ್ತಿಕ ಸೋಮವಾರವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇಗುಲಗಳಲ್ಲಿ ದೀಪೋತ್ಸವದ ಸಂಭ್ರಮ ಕಳೆಗಟ್ಟಿತ್ತು. ಸಂಜೆ ದೀಪಗಳಿಂದ ದೇಗುಲಗಳ ಆವರಣ ಜಗಮಗಿಸಿತು. ಹೆಣ್ಣುಮಕ್ಕಳು, ಭಕ್ತರು ದೇಗುಲಗಳ ಬಳಿ ದೀಪ ಹಚ್ಚಿದರು.

ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಬೆಳಿಗ್ಗೆಯಿಂದಲೇ ಜನರು ದೇಗುಲಗಳತ್ತ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ತಾಲ್ಲೂಕಿನ ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನ, ನಗರದ ಎಂ.ಜಿ. ರಸ್ತೆಯಲ್ಲಿರುವ ಮರುಳಸಿದ್ದೇಶ್ವರ, ಕಂದವಾರ ಬಾಗಿಲು ರಸ್ತೆಯ ವೆಂಕಟರಮಣ ಸ್ವಾಮಿ, ಕೋಟೆ ಚನ್ನಕೇಶವ ಸ್ವಾಮಿ, ವರಸಿದ್ಧಿ ವಿನಾಯಕ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ADVERTISEMENT

ಧರ್ಮಛತ್ರ ರಸ್ತೆಯ ವಿದ್ಯಾಗಣಪತಿ, ಗಂಗಮ್ಮನಗುಡಿ ರಸ್ತೆಯ ಜಾಲಾರಿ ಗಂಗಮ್ಮ, ಕೋದಂಡರಾಮ ಸ್ವಾಮಿ, ವಾಪಸಂದ್ರದಲ್ಲಿರುವ ನಿಡುಮಾಮಿಡಿ ಮಠ, ಎಚ್‌.ಎಸ್‌. ಗಾರ್ಡನ್‌ನಲ್ಲಿರುವ ಸುಬ್ರಮಣ್ಯೇಶ್ವರ, ಶನೇಶ್ವರ ಮತ್ತು ಶಿರಡಿ ಸಾಯಿ ಬಾಬಾ ಮುಂತಾದ ದೇವಸ್ಥಾನಗಳಲ್ಲಿ ದಿನವೀಡಿ ಸಂಭ್ರಮ ಮನೆ ಮಾಡಿತ್ತು.  

ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಪೂಜೆ, ಮಹಾ ಮಂಗಳಾರತಿ ನಡೆದವು. ವಿಶೇಷ ಅಲಂಕಾರ ಮಾಡಲಾಗಿತ್ತು. ಅನೇಕ ಕಡೆಗಳಲ್ಲಿ ಪ್ರಸಾದ, ಭಕ್ತಿ ಸಂಗೀತದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಹುತೇಕ ದೇವಸ್ಥಾನಗಳು ರಾತ್ರಿ ವೇಳೆ ವಿದ್ಯುತ್‌ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದವು.

ಮಹಿಳೆಯರು ದೇಗುಲ ಆವರಣದಲ್ಲಿ ಎಲೆಯ ಮೇಲೆ ಪೂಜಾ ಸಾಮಗ್ರಿಗಳೊಂದಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು ಇಟ್ಟು ದೇವರಿಗೆ ನೈವೇದ್ಯ ಮಾಡಿದರು. ದೀಪ ಹೊತ್ತಿಸಿ ದೇವರಿಗೆ ನಮಿಸುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಕುಟುಂಬ ಸಮೇತರಾಗಿ ದೇಗುಲಗಳತ್ತ ಮುಖ ಮಾಡಿದ ಜನರು ದೇವಸ್ಥಾನಗಳಲ್ಲಿ ತಮ್ಮ ಶಕ್ತ್ಯಾನುಸಾರ ದೀಪಗಳನ್ನು ಹೊತ್ತಿಸಿ, ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಭೋಗ ನಂದೀಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ರಾತ್ರಿಯವರೆಗೂ ಭಕ್ತರ ದಟ್ಟಣೆ ಇತ್ತು. ಭೋಗನಂದೀಶ್ವರ, ಅರುಣಾಚಲೇಶ್ವರ, ಉಮಾಮಹೇಶ್ವರ ಮತ್ತು ಗಿರಿಜಾ ಮಾತೆಗೆ ಕಾರ್ತಿಕ ಸೋಮವಾರದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಭೋಗ ನಂದೀಶ್ವರ  ದೇಗುಲದ ಆವರಣದಲ್ಲಿ ದೀಪ ಹಚ್ಚಲು ಅವಕಾಶ ಇರಲಿಲ್ಲ. ದೇಗುಲದ ಹೊರಭಾಗದ ಆವರಣದಲ್ಲಿ ಭಕ್ತರು ಹೊತ್ತಿಸಿದ ಹಣತೆಗಳ ಸಮೂಹ ಇಡೀ ದೇಗುಲಕ್ಕೆ ಹೊಸ ಮೆರುಗು ನೀಡಿತ್ತು.

ಚಿಕ್ಕಬಳ್ಳಾಪುರದ ಮರುಳಸಿದ್ದೇಶ್ವರ ದೇಗುಲದಲ್ಲಿ ಭಕ್ತರ ಸಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.