ADVERTISEMENT

ನೀರಿಗಾಗಿ ಪ್ರಾಣ ತೆತ್ತ ಕೃಷ್ಣಮೃಗ

ನಾಡಿಗೆ ಬರುತ್ತಿರುವ ‍ಪ್ರಾಣಿಗಳು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 4:19 IST
Last Updated 8 ಏಪ್ರಿಲ್ 2021, 4:19 IST
ಶಿಡ್ಲಘಟ್ಟ ತಾಲ್ಲೂಕಿನ ಪಲಿಚೇರ್ಲು ಗ್ರಾಮದ ಅರಣ್ಯದಿಂದ ಗ್ರಾಮದ ಬಳಿ ಬಂದಿದ್ದ ಕೃಷ್ಣಮೃಗವು ನಾಯಿಗಳ ದಾಳಿಗೆ ಬಲಿಯಾಯಿತು
ಶಿಡ್ಲಘಟ್ಟ ತಾಲ್ಲೂಕಿನ ಪಲಿಚೇರ್ಲು ಗ್ರಾಮದ ಅರಣ್ಯದಿಂದ ಗ್ರಾಮದ ಬಳಿ ಬಂದಿದ್ದ ಕೃಷ್ಣಮೃಗವು ನಾಯಿಗಳ ದಾಳಿಗೆ ಬಲಿಯಾಯಿತು   

ಶಿಡ್ಲಘಟ್ಟ: ಬೇಸಿಗೆಯ ಬಿರು ಬಿಸಿಲಿಗೆ ಬಯಲು ಸೀಮೆಯಲ್ಲಿ ಮನುಷ್ಯರು ಮಾತ್ರವಲ್ಲದೆ, ಪ್ರಾಣಿ - ಪಕ್ಷಿಗಳು ಬಸವಳಿಯುತ್ತಿವೆ. ಬಿಸಿಲಿನ ಕಾವಿಗೆ ನಿತ್ರಾಣಗೊಂಡು ನೆಲಕ್ಕುರುಳುತ್ತಿವೆ, ಜತೆಗೆ ಕುಡಿಯಲು ನೀರು ಸಿಗದೆ ಜೀವ ಬಿಡುತ್ತಿವೆ.

ಬಿಸಿಲಿನ ಧಗೆಯಿಂದ, ನೀರು, ಆಹಾರ ಅರಸಿ ಹಕ್ಕಿ ಪ್ರಾಣಿಗಳು ವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಒಂದು ಪ್ರದೇಶದಿಂದ ಇನ್ನೊಂದೆಡೆಗೆ ಹಾರುವಾಗ ಬಿಸಿಲಿನ ಧಗೆಗೆ ಅವುಗಳ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣದಿಂದಾಗಿ ಪಕ್ಷಿಗಳು ನಿತ್ರಾಣ ಹೊಂದುತ್ತಿವೆ. ಹೀಗೆ ನಿತ್ರಾಣಗೊಂಡ ಪಕ್ಷಿಗಳಲ್ಲಿ ನೀರು ಸಿಗದೆ ಹಲವು ಪ್ರಾಣವನ್ನೇ ಬಿಡುತ್ತಿವೆ ಎಂದು ಪ್ರಾಣಿ ತಜ್ಞರು ಹೇಳುತ್ತಾರೆ.

ಬೇಸಿಗೆಯ ಏರಿ ಬಿಸಿಯಿಂದ ಶಿಡ್ಲಘಟ್ಟ ತಾಲ್ಲೂಕಿನ ಅರಣ್ಯಪ್ರದೇಶದಲ್ಲಿನ ಪ್ರಾಣಿಗಳಿಗೆ ನೀರು ಸಿಗದೆ ಕೆಲವು ಗ್ರಾಮಗಳ ಬಳಿ ಬರುತ್ತಿವೆ. ಅವುಗಳಲ್ಲಿ ಕೃಷ್ಣಮೃಗಗಳು ಹೆಚ್ಚಿದ್ದು, ಅವುಗಳು ನಾಯಿಗಳ ದಾಳಿಗೆ ತುತ್ತಾಗುತ್ತಿವೆ.

ADVERTISEMENT

ಕಳೆದ ಸೋಮವಾರ ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮದಲ್ಲಿ ನಾಯಿಗಳ ದಾಳಿಗೊಳಗಾದ ಕೃಷ್ಣಮೃಗವನ್ನು ಗ್ರಾಮಸ್ಥರು ರಕ್ಷಿಸಲು ಪ್ರಯತ್ನಿಸಿದ್ದರೂ ಅದು ಮೃತಪಟ್ಟಿತ್ತು. ಬುಧವಾರ ತಾಲ್ಲೂಕಿನ ಪಲಿಚೇರ್ಲು ಗ್ರಾಮದ ಅರಣ್ಯದಿಂದ ಗ್ರಾಮದ ಬಳಿ ಬಂದಿದ್ದ ಕೃಷ್ಣಮೃಗವು ನಾಯಿಗಳ ದಾಳಿ ತುತ್ತಾಗಿದೆ. ಮೃತಪಟ್ಟ ಕೃಷ್ಣಮೃಗವನ್ನು ಗ್ರಾಮಸ್ಥರು ಮೃತ ಕೃಷ್ಣ ಮೃಗವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

‘ಒಂದೇ ವಾರದಲ್ಲಿ ತಾಲ್ಲೂಕಿನಲ್ಲಿ ಎರಡು ಕೃಷ್ಣಮೃಗಗಳು ಗ್ರಾಮಕ್ಕೆ ಬಂದು ನಾಯಿಗಳ ಬಾಯಿಗೆ ಈಡಾಗಿವೆ. ಇದಕ್ಕೆ ಕಾರಣ ಅರಣ್ಯ ಪ್ರದೇಶದಲ್ಲಿ ನೀರಿಲ್ಲದಿರುವುದೇ ಆಗಿದೆ. ಬೇಸಿಗೆಯ ಕಾಲದಲ್ಲಿ ಹಿಂದೆ ಅರಣ್ಯ ಅಧಿಕಾರಿಗಳು ಅಲ್ಲಲ್ಲಿ ನೀರಿಡುವ ಪರಿಪಾಠವನ್ನು ಇರಿಸಿಕೊಂಡಿದ್ದರು. ಈಗ ಅರಣ್ಯಪ್ರದೇಶದ ಪ್ರಾಣಿಗಳ ಅನುಕೂಲಕ್ಕೆ ಅಲ್ಲಲ್ಲಿ ನೀರನ್ನು ಇಡುವ ಕೆಲಸ ತುರ್ತಾಗಿ ಆಗಬೇಕಿದೆ’ ಎಂದು ಸಾರ್ವಜನಿಕರು, ಪರಿಸರಪ್ರೇಮಿಗಳು ಒತ್ತಾಯಿಸಿದ್ದಾರೆ.

‘ನಗರದಲ್ಲಿ 33ರಿಂದ 35 ಡಿಗ್ರಿ ಸೆಲ್ಷಿಯಸ್‌ ತಾಪಮಾನವಿದೆ. ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ ತುಸು ಹೆಚ್ಚಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ನಡುವೆ ಬಿಸಿಲ ತಾಪ ಹೆಚ್ಚಿರುತ್ತದೆ. ಪಕ್ಷಿಗಳಷ್ಟೇ ಅಲ್ಲದೆ, ಮಂಗಗಳು, ನಾಯಿ, ಬೆಕ್ಕು, ದನಕರುಗಳೂ ಬಿಸಿಲ ಬೇಗೆಗೆ ತತ್ತರಿಸುತ್ತಿವೆ. ಮನೆಯ ಮುಂಭಾಗದಲ್ಲಿ ಅಥವಾ ತಾರಸಿಯ ಮೇಲೆ ಪಾತ್ರೆಯಲ್ಲಿ ನೀರು ತುಂಬಿಸಿಡಿ. ಪ್ರತಿ ರಸ್ತೆಯ ಒಂದು ಬದಿಯಲ್ಲಿ ಸಣ್ಣದೊಂದು ತೊಟ್ಟಿ ಇಟ್ಟು ನೀರು ತುಂಬಿಸಿ. ಈ ನೀರನ್ನು ಪ್ರತಿ ದಿನ ತಪ್ಪದೇ ಬದಲಿಸಿ. ಮನೆಯ ಬಳಿ ಪಕ್ಷಿಗಳು ವಿಶ್ರಾಂತಿ ಪಡೆಯಲು ಬಿದಿರಿನ ಗೂಡು ತೂಗುಹಾಕಿ. ಪಕ್ಷಿಗಳಿಗೆ ಆಹಾರಕ್ಕಾಗಿ ಮನೆಯ ಹೊರಗೆ ಕಾಳುಗಳನ್ನು ಹಾಕಿ’ ಎನ್ನುತ್ತಾರೆ ಶಿಕ್ಷಕ ನಾಗಭೂಷಣ್.

ನಾಲ್ಕು ನೀರಿನ ತೊಟ್ಟಿ: ‘ನಮ್ಮ ಕಚೇರಿ ಹಿಂಬದಿಯಲ್ಲಿನ ಪಟ್ರ ಹಳ್ಳಿ ಅರಣ್ಯಪ್ರದೇಶದಲ್ಲಿ ನಾಲ್ಕು ನೀರಿನ ತೊಟ್ಟಿಗಳನ್ನಿರಿಸಿ ನೀರನ್ನು ಹಾಕಿಸುತ್ತಿ ದ್ದೇವೆ. ಅಜ್ಜಕದಿರೇನಹಳ್ಳಯಲ್ಲಿನ ಅರಣ್ಯ ಪ್ರದೇಶದಲ್ಲಿ ಹಿಂದೆ ಇದ್ದ ತೊಟ್ಟಿಗಳಲ್ಲಿ ನೀರನ್ನು ಹಾಕಿಸುತ್ತಿದ್ದೇವೆ. ಈ ಬಗ್ಗೆ ಗಮನಹರಿಸುತ್ತೇವೆ’ ಎಂದು ಶಿಡ್ಲಘಟ್ಟ ವಲಯ ಅರಣ್ಯಾಧಿಕಾರಿ ದಿವ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.