ADVERTISEMENT

ಚಿಕ್ಕಬಳ್ಳಾಪುರ ವಿಭಾಗದ ಬಿಜಿಎಸ್ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಮೇ 2025, 13:50 IST
Last Updated 10 ಮೇ 2025, 13:50 IST
ಚಿಕ್ಕಬಳ್ಳಾಪುರ ಎಸ್.ಜೆ.ಸಿ.ಐ.ಟಿಯಲ್ಲಿ ನಡೆದ ಚಿಕ್ಕಬಳ್ಳಾಪುರ ವಿಭಾಗದ ಬಿಜಿಎಸ್ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು
ಚಿಕ್ಕಬಳ್ಳಾಪುರ ಎಸ್.ಜೆ.ಸಿ.ಐ.ಟಿಯಲ್ಲಿ ನಡೆದ ಚಿಕ್ಕಬಳ್ಳಾಪುರ ವಿಭಾಗದ ಬಿಜಿಎಸ್ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು   

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಸೃಜನಾತ್ಮಕ ಚಿಂತನೆಯೊಂದಿಗೆ, ಪ್ರಯೋಗ ಶೀಲತೆಯಿಂದ ಅಧ್ಯಯನ ಮುಂದುವರಿಸಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ ಎಸ್.ಜೆ.ಸಿ.ಐ.ಟಿಯಲ್ಲಿ ಶನಿವಾರ ನಡೆದ ಚಿಕ್ಕಬಳ್ಳಾಪುರ ವಿಭಾಗದ ಬಿಜಿಎಸ್ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೌಶಲಾಭಿವೃದ್ಧಿಯೊಂದಿಗೆ ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಪದವಿ ಪಡೆದರಷ್ಟೇ ಸಾಲದು ಸಮಾಜದ ಸೇವೆಗೆ ಸದಾ ಸಿದ್ದರಿರಬೇಕು ಎಂದು ಹೇಳಿದರು.

ADVERTISEMENT

ಇಂದಿನ ಸ್ಪರ್ಧಾ ಯುಗದಲ್ಲಿ ಕೌಶಲಗಳು ಹೆಚ್ಚು ಮಹತ್ವ ಪಡೆದಿವೆ. ಕೌಶಲಗಳನ್ನು ಹೊಂದಿದರೆ ಉದ್ಯೋಗದ ಅವಕಾಶಗಳು ಸಹ ದೊಡ್ಡ ಮಟ್ಟದಲ್ಲಿ ತೆರೆದುಕೊಳ್ಳಲಿವೆ ಎಂದು ಹೇಳಿದರು.

ಸಂಸದ ಡಾ.ಕೆ. ಸುಧಾಕರ್‌, ವಿದ್ಯಾರ್ಥಿಗಳೇ ದೇಶದ ರಾಯಭಾರಿಗಳು. ಪದವಿಗಿಂತಲೂ ಪ್ರಾಮಾಣಿಕತೆ ಮುಖ್ಯ. ದೊಡ್ಡ ಕನಸುಗಳನ್ನು ಕಾಣಬೇಕು. ಅದಕ್ಕೆ ತಕ್ಕಂತೆ ದಿಟ್ಟ ಹೆಜ್ಜೆ ಇಡಬೇಕು. ಆಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿದರು.

 ಘಟಿಕೋತ್ಸವದ ಭಾಷಣ ಮಾಡಿದ ವಿಜ್ಞಾನಿ ಗೌತಮ್‌ ರಾಧಾಕೃಷ್ಣ ದೇಸಿರಾಜು, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯದ ವಿಷಯಕ್ಕೆ ಸೀಮಿತವಾಗದೆ ಸಾಮಾಜಿಕ ಕಳಕಳಿ ಹೊಂದಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬಿಜಿಎಸ್‌ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಎನ್. ಶಿವರಾಮ ರೆಡ್ಡಿ, ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿರ್ವಹಣೆ ಮಾಡಬೇಕು. ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಕಲಿತಿರುವ ವಿದ್ಯೆಯನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.

ಸಮಾರಂಭದಲ್ಲಿ ಬಿಜಿಎಸ್ ಸೈನ್ಸ್ ಅಕಾಡೆಮಿ ಅಗಲಗುರ್ಕಿ, ಬಿಜಿಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಚಿಕ್ಕಬಳ್ಳಾಪುರ, ಬಿಜಿಎಸ್ ಬಿಪಿಇಡಿ  ಕಾಲೇಜು ಚಿಕ್ಕಬಳ್ಳಾಪುರ, ಬಿಜಿಎಸ್ ಸ್ಕೂಲ್ ಆಫ್ ಬಿಜಿನೆಸ್ ಮ್ಯಾನೇಜ್‍ಮೆಂಟ್ ಶ್ರೀನಿವಾಸಪುರ, ಬಿಜಿಎಸ್ ಕಾಲೇಜ್ ಆಫ್ ಕಾಮರ್ಸ್ ಮಾಲೂರು, ಬಿಜಿಎಸ್‌ ಕಾಲೇಜ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು ಕಾಲೇಜುಗಳ ಒಟ್ಟು 672 ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪದವಿ ಪ್ರದಾನ ಮಾಡಲಾಯಿತು. 

ಎಸ್.ಜೆ.ಸಿ.ಐ.ಟಿ ಪ್ರಾಂಶುಪಾಲ ಜಿ.ಟಿ.ರಾಜು, ಡೀನ್‌ಗಳು, ಪ್ರಾಂಶುಪಾಲರು, ಉಪನ್ಯಾಸಕರು, ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.