ಬಾಗೇಪಲ್ಲಿ: ಬಿತ್ತನೆ ಸಮಯದಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಆಗದಂತೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಸಮಿತಿ ಮುಖಂಡರು ಮಂಗಳವಾರ ಕೃಷಿ ಇಲಾಖೆ ಮುಂದೆ ಪ್ರತಿಭಟನೆ ಮಾಡಿದರು.
ಪಟ್ಟಣದ ಸುಂದರಯ್ಯ ಭವನದ ಮುಂಭಾಗದಿಂದ ಹೊರಟ ಕೆಪಿಆರ್‌ಎಸ್ ಮುಖಂಡರು ಬೈಕ್ ರ‍್ಯಾಲಿ ಮಾಡಿದರು.
ಸಂಘದ ತಾಲ್ಲೂಕು ಸಂಚಾಲಕ ಡಿ.ಟಿ.ಮುನಿಸ್ವಾಮಿ ಮಾತನಾಡಿ, ಕಳೆದ ಒಂದು ವಾರದಿಂದ ಮುಂಗಾರು ಆರಂಭ ಆಗಿದೆ. ರೈತರು ಬಿತ್ತನೆಗಾಗಿ ಜಮೀನನ್ನು ಹದ ಮಾಡುತ್ತಿದ್ದಾರೆ. ಈ ಹಿಂದೆ ರೈತರಿಗೆ ಕಡಿಮೆ ಬಿತ್ತನೆ ಬೀಜ, ರಸಗೊಬ್ಬರ ನೀಡಿದ್ದಾರೆ. ಸೊಸೈಟಿ ಮುಂದೆ ಬಿತ್ತನೆಬೀಜ, ರಸಗೊಬ್ಬರ ಪಡೆಯಲು ಗಂಟೆಗಟ್ಟಲೆ ಕಾಯಬೇಕಾಗಿತ್ತು. ಈ ಬಾರಿ ಸಕಾಲಕ್ಕೆ ಸರಬರಾಜು ಮಾಡಿಸಬೇಕು. ಸರ್ಕಾರಿ, ಸಹಕಾರಿ ಕಚೇರಿ, ಅಂಗಡಿಮುಂದೆ ದಾಸ್ತಾನು, ದರ ಪಟ್ಟಿಗಳನ್ನು ಪ್ರದರ್ಶನ ಮಾಡಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಸಹ ಸಂಚಾಲಕ ಚನ್ನರಾಯಪ್ಪ ಮಾತನಾಡಿ, ಮುಂಗಾರು ಮಳೆ ಆಗಿರುವುದರಿಂದ, ರೈತರು ಭೂಮಿ ಹದ ಮಾಡುತ್ತಿದ್ದಾರೆ. ಇದೀಗ ಬಿತ್ತನೆಬೀಜ, ರಸಗೊಬ್ಬರ ಅವಶ್ಯಕತೆ ಇದೆ. ಸರ್ಕಾರಿ, ಸಹಕಾರಿ ಸಂಸ್ಥೆಗಳ ಅಂಗಡಿಗೆ ಕೃಷಿ ಇಲಾಖೆ ಹಾಗೂ ಜಾಗೃತ ದಳದ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ಮಾಡಬೇಕು. ಸರ್ಕಾರದ ದರ ಹೊರತುಪಡಿಸಿ ಹೆಚ್ಚುವರಿ ವಸೂಲಿ ಮಾಡಬಾರದು ಎಂದರು.
ಕೃಷಿ ಇಲಾಖೆ ಅಧಿಕಾರಿ ಗಂಗಾಧರರೆಡ್ಡಿ ಮನವಿ ಸ್ವೀಕರಿಸಿದರು. ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.
ಮುಖಂಡ ಎಂ.ಎನ್.ರಘುರಾಮರೆಡ್ಡಿ, ಅಶ್ವತ್ಥಪ್ಪ, ಜಿ.ಕೃಷ್ಣಪ್ಪ, ನರಸಿಂಹರೆಡ್ಡಿ, ರಾಮಾಂಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.