ADVERTISEMENT

ಗ್ರಾಮೀಣ ಆರ್ಥಿಕತೆ ಪುನಶ್ಚೇತನಕ್ಕೆ ಆಗ್ರಹ

ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳ ಮನವಿ

​ಪ್ರಜಾವಾಣಿ ವಾರ್ತೆ
Published 11 ಮೇ 2020, 13:23 IST
Last Updated 11 ಮೇ 2020, 13:23 IST
ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ನಾಗಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ನಾಗಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಆರ್ಥಿಕತೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ’ಲಾಕ್‌ಡೌನ್‌ನಿಂದ ರೈತರು, ಗ್ರಾಮೀಣ ಕೃಷಿ ಕೂಲಿಕಾರರು, ಕಾರ್ಮಿಕರು, ಕಸಬುದಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಪ್ರಸ್ತುತ ಆದಾಯ ಮತ್ತು ಕೆಲಸವಿಲ್ಲದೆ ಪ್ರತಿಯೊಬ್ಬರ ಬದುಕು ದುರ್ಬರವಾಗಿದೆ‘ ಎಂದು ಹೇಳಿದರು.

’ದುಡಿಮೆಯನ್ನೇ ನಂಬಿ ಬದುಕುವ ಕಾರ್ಮಿಕರಿಗೆ ಮುಂದಿನ ಬದುಕು ಹೇಗೆ ಎಂಬ ಚಿಂತೆ ಶುರುವಾಗಿದೆ. ಮಾರುಕಟ್ಟೆ ವ್ಯವಸ್ಥೆ ಹದಗೆಟ್ಟ ಕಾರಣಕ್ಕೆ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳು ಬೆಲೆ ಕಳೆದುಕೊಂಡ ಕಾರಣಕ್ಕೆ ರೈತರು ಸಾಲಗಾರರಾಗಿದ್ದಾರೆ‘ ಎಂದು ತಿಳಿಸಿದರು.

ADVERTISEMENT

’ಸರ್ಕಾರ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆಗುವಷ್ಟು ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಬೇಕು. ಕೃಷಿ ಉತ್ಪನ್ನಗಳನ್ನು ವೈಜ್ಞಾನಿಕ ರೀತಿಯ ಬೆಂಬಲ ಬೆಲೆಯಲ್ಲಿ ಖರೀದಿಸುವ ಕೇಂದ್ರಗಳನ್ನು ತೆರೆಯಬೇಕು‘ ಎಂದು ಆಗ್ರಹಿಸಿದರು.

’ಆರ್ಥಿಕ ನಷ್ಟ ಅನುಭವಿಸಿ ಸಾಲಗಾರರಾದ ರೈತರ ಸಮೀಕ್ಷೆ ನಡೆಸಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಸಾಲ ಮನ್ನಾ ಮಾಡುವ ಜತೆಗೆ ಪರಿಹಾರ ನೀಡಬೇಕು. ರೈತರಿಗೆ ಟೋಲ್‌ ಶುಲ್ಕದಿಂದ ವಿನಾಯಿತಿ ನೀಡಬೇಕು‘ ಎಂದು ಹೇಳಿದರು.

’ರೈತರು, ಕೃಷಿ ಕೂಲಿಕಾರರು, ಗ್ರಾಮೀಣ ಕಸಬುದಾರರ ಕುಟುಂಬಗಳಿಗೆ ಕನಿಷ್ಠ ₹10 ಸಾವಿರ ನೆರವು ನೀಡಬೇಕು. ನರೇಗಾ ಯೋಜನೆಯಲ್ಲಿ ಮಾನವ ದಿನಗಳ ಮಿತಿ ತೆಗೆದುಹಾಕಬೇಕು. ಕೂಲಿಯನ್ನು ₹700ಕ್ಕೆ ಏರಿಸಬೇಕು‘ ಎಂದು ಒತ್ತಾಯಿಸಿದರು.

’ಕೃಷಿ ಸಾಲ ದುಪ್ಪಟ್ಟು ಮಾಡಬೇಕು. ಸಹಕಾರಿ ಕ್ಷೇತ್ರದ ಮಾದರಿಯಲ್ಲಿಯೇ ಖಾಸಗಿ ಕ್ಷೇತ್ರಗಳ ಬ್ಯಾಂಕ್‌ಗಳಲ್ಲಿ ಕೂಡ ₹3 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ನೀಡಲು ಕ್ರಮಕೈಗೊಳ್ಳಬೇಕು. ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿನ ಸಾಲದ ಮೇಲಿನ ಬಡ್ಡಿಗಳನ್ನು ಕೇಂದ್ರ ಸರ್ಕಾರ ಭರಿಸಬೇಕು‘ ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ಬಸವರಾಜ್, ನಾಗೇಶ್, ಸುದರ್ಶನ್, ಮುನಿರಾಜ್, ಸೋಮಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.