ADVERTISEMENT

ಆಸ್ತಿ ನಾಶ ಮಾಡುವುದು ಖಂಡನಾರ್ಹ

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 12:06 IST
Last Updated 6 ಸೆಪ್ಟೆಂಬರ್ 2019, 12:06 IST

ಚಿಕ್ಕಬಳ್ಳಾಪುರ: ‘ಶಾಸಕ ಡಿ.ಕೆ.ಶಿವಕುಮಾರ್ ಅವರ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಹಿಂಸಾಚಾರ ನಡೆಸುವ ಜತೆಗೆ ಸರ್ಕಾರದ ಆಸ್ತಿ ನಾಶ ಮಾಡುತ್ತಿರುವುದು ಖಂಡನಾರ್ಹ’ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವಕುಮಾರ್ ಅವರ ಬಂಧನವನ್ನು ಕಾಂಗ್ರೆಸ್‌ ಕಾರ್ಯಕರ್ತರೇ ದೊಡ್ಡ ಸಮಸ್ಯೆಯಂತೆ ಬಿಂಬಿಸಿ ಜನಸಾಮಾನ್ಯರಲ್ಲಿ ಭಯಭೀತಿ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಶಿವಕುಮಾರ್ ಅವರು ರಾಜ್ಯ ಅಥವಾ ರಾಷ್ಟ್ರದ ಸೇವೆ ಮಾಡಿ ಏನಾದರೂ ಜೈಲಿಗೆ ಹೋಗಿದ್ದರೆ ಅವರ ಪರವಾಗಿ ಪ್ರತಿಭಟನೆ ಮಾಡಲಿ’ ಎಂದು ಹೇಳಿದರು.

‘ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು. ಆದರೆ ಅದರ ನೆಪದಲ್ಲಿ ಸಾರ್ವಜನಿಕ ಆಸ್ತಿ ನಾಶ ಮಾಡಿದರೆ ಯಾರು ಹೊಣೆ? ಇತ್ತೀಚೆಗೆ ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಬಂದ್ ಮಾಡಿದ ಪರಿಣಾಮ ವಾಹನ ಸಂಚಾರರು ತೀವ್ರ ತೊಂದರೆ ಅನುಭವಿಸಿದರು. ಹೆದ್ದಾರಿ ಬಂದ್‌ ಮಾಡಿ ಅಡ್ಡಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಅವರು ಕೆಂದ್ರ ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದಾಗ ನಾವೇನು ಈ ರೀತಿ ಹೋರಾಟ ಮಾಡಲಿಲ್ಲ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದ್ದರೆ ನಾವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ’ ಎಂದರು.

ಮಂಡಲ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್‌, ನಗರ ಘಟಕದ ಅಧ್ಯಕ್ಷ ಮಂಜುನಾಥ್, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ, ಮುಖಂಡರಾದ ಮಂಜುನಾಥ್ , ಭೈರೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.