ADVERTISEMENT

ಕಡೇ ಕಾರ್ತೀಕ ಸೋಮವಾರ: ದೇಗುಲಗಳಿಗೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 7:08 IST
Last Updated 22 ನವೆಂಬರ್ 2022, 7:08 IST
ಚಿಂತಾಮಣಿ ತಾಲ್ಲೂಕಿನ ಕೈವಾರದ ಭೀಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ಮಹಿಳೆಯರು ದೀಪ ಬೆಳಗಿಸುತ್ತಿರುವುದು
ಚಿಂತಾಮಣಿ ತಾಲ್ಲೂಕಿನ ಕೈವಾರದ ಭೀಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ಮಹಿಳೆಯರು ದೀಪ ಬೆಳಗಿಸುತ್ತಿರುವುದು   

ಚಿಂತಾಮಣಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಕಡೇ ಕಾರ್ತೀಕ ಸೋಮವಾರವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜನರು ಬೆಳಿಗ್ಗಯಿಂದಲೇ ಸಂಭ್ರಮದಿಂದ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು.

ನಗರದ ನಾಗನಾಥೇಶ್ವರಸ್ವಾಮಿ ದೇವಾಲಯ ಮತ್ತು ಅಜಾದ್ ಚೌಕದ ಹರಿಹರೇಶ್ವರಸ್ವಾಮಿ ದೇವಾಲಯಗಳಲ್ಲಿ ಲಕ್ಷ ದೀಪೋತ್ಸವ ನಡೆಸಲಾಯಿತು. ಎನ್ಎನ್‌ಟಿ ರಸ್ತೆಯ ನಾಗನಾಥೇಶ್ವರಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಸರತಿಯ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ದೇವಾಲಯ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿತ್ತು. ವಿಶೇಷ ಪೂಜೆ, ಅಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಉಪ್ಪರಪೇಟೆ ಗ್ರಾಮದಲ್ಲಿ ನೆಲೆಸಿರುವ ಸೃಷ್ಟಿಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ADVERTISEMENT

ಕೈವಾರದ ಭೀಮಲಿಂಗೇಶ್ವರಸ್ವಾಮಿ ದೇವಾಲಯ, ಮಹಾ ಕೈಲಾಸಗಿರಿ ಗುಹಾಂತರ ದೇವಾಲಯ, ಮುರುಗಮಲೆಯ ಮುಕ್ತಿಶ್ವರ ದೇವಾಲಯ, ಆಲಂಬಗಿರಿ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಎಲ್ಲ ದೇವಾಲಯಗಳಲ್ಲಿ ಜನಜಂಗುಳಿ ಕಂಡುಬರುತ್ತಿತ್ತು.

ಮಹಿಳೆಯರು ದೇಗುಲದ ಆವರಣದಲ್ಲಿ ಎಲೆಯ ಮೇಲೆ ಪೂಜೆಯ ಸಾಮಗ್ರಿಗಳೊಂದಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣುಗಳನ್ನು ಇಟ್ಟು ದೇವರಿಗೆ ನೈವೇದ್ಯ ಮಾಡಿ ಹೊಸದಾಗಿ ಖರೀದಿಸಿದ ಮಣ್ಣಿನ ಹಣತೆಗಳಲ್ಲಿ ಕಾರ್ತಿಕ ದೀಪ ಹೊತ್ತಿಸಿ ದೇವರಿಗೆ ನಮಿಸುತ್ತಿದ್ದರು. ಸಂಜೆಯಾಗುತ್ತಲೇ ಕುಟುಂಬ ಸಮೇತಬಂದ ಜನರು ದೇವಸ್ಥಾನಗಳಲ್ಲಿ ದೀಪ ಹೊತ್ತಿಸಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.