ADVERTISEMENT

ಚಿಂತಾಮಣಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 12888 ಮಂದಿಯಲ್ಲಿ ಮಧುಮೇಹ ಪತ್ತೆ: ಆತಂಕ

ಚಿಂತಾಮಣಿ ಗ್ರಾಮೀಣ ಭಾಗದ ಜನರಿಗೆ ಗೃಹಭಾಗ್ಯ ಯೋಜನೆಯಡಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 3:11 IST
Last Updated 28 ಫೆಬ್ರುವರಿ 2026, 3:11 IST
<div class="paragraphs"><p>ಮಧುಮೇಹ</p></div>

ಮಧುಮೇಹ

   

ಚಿಂತಾಮಣಿ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಒಟ್ಟಾರೆ 12,888 ಮಂದಿ ಮಧುಮೇಹ ರೋಗಕ್ಕೆ ತುತ್ತಾಗಿದ್ದಾರೆ ಎಂಬ ಆಘಾತಕಾರಿ ಅಂಶ ಆರೋಗ್ಯ ಇಲಾಖೆ ಅಂಕಿಅಂಶಗಳಿಂದ ಗೊತ್ತಾಗಿದೆ. 

ಜನರ ಮನೆ ಬಾಗಿಲಿಗೆ ಹೋಗಿ ಜನರಲ್ಲಿ ವ್ಯಾಪಿಸಿರಬಹುದಾದ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಅದಕ್ಕೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗಗಳಲ್ಲಿ ‘ಗೃಹಭಾಗ್ಯ’ ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯಡಿ 2025ರ ಜೂನ್‌ನಿಂದ 2026ರ ಜನವರಿ 31ರವರೆಗೆ ಗ್ರಾಮೀಣ ಭಾಗದ ಪ್ರತಿಯೊಬ್ಬರ ಮನೆಗೆ ಆರೋಗ್ಯ ಸಿಬ್ಬಂದಿ ತೆರಳಿ ಒಟ್ಟಾರೆ 1,18,256 ಮಂದಿಯ ಆರೋಗ್ಯ ಪರೀಕ್ಷೆ ಮಾಡಿದ್ದಾರೆ. ಈ ಪೈಕಿ 12,888 ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಮಚಂದ್ರಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

ಅತ್ಯಾಧುನಿಕ ಜೀವನ ಶೈಲಿ, ಒತ್ತಡದ ಬದುಕು, ಆಹಾರ ಪದ್ಧತಿ, ಕೆಲಸದ ಒತ್ತಡ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸುತ್ತಾರೆ. 

ಈ ಕಾಯಿಲೆಗೆ ತುತ್ತಾದವರಿಗೆ ಉಚಿತ ಔಷಧ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಕಾಯಿಲೆಯ ಆರಂಭಿಕ ಹಂತದಲ್ಲಿರುವವರಿಗೆ ವೈದ್ಯರು ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಬದಲಾವಣೆ ಸೇರಿ ವಿವಿಧ ಮಾರ್ಗದರ್ಶನ ನೀಡುತ್ತಿದ್ದಾರೆ. 

ತಾಲ್ಲೂಕಿನಲ್ಲಿ ಗೃಹಭಾಗ್ಯ ಯೋಜನೆಯಡಿ 182 ಆಶಾ ಕಾರ್ಯಕರ್ತೆಯರು, 24 ಸಮುದಾಯ ಆರೋಗ್ಯಾಧಿಕಾರಿಗಳು, 22 ಆರೋಗ್ಯ ಸಂರಕ್ಷಣಾಧಿಕಾರಿಗಳು ವೈದ್ಯರ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2026ರ ಜನವರಿ 31ರವರೆಗೆ ಗ್ರಾಮೀಣ ಪ್ರದೇಶಗಳಲ್ಲಿ 57,509 ಮನೆಗಳಿಗೆ ಭೇಟಿ ನೀಡಿ, 30 ವರ್ಷ ಮೇಲ್ಪಟ್ಟವರನ್ನು ತಪಾಸಣೆ ಮಾಡಲಾಗಿದೆ. ಮಧುಮೇಹ, ಅಧಿಕ ರಕ್ತದ ಒತ್ತಡ ಸೇರಿ 14 ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸಲಾಗುತ್ತದೆ.

ಮಧುಮೇಹ ಮತ್ತು ರಕ್ತದ ಒತ್ತಡ ಇರುವವರಿಗೆ ಒಂದು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಜಾರಿಯಲ್ಲಿರುವ ಗೃಹಭಾಗ್ಯ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 

ಗ್ರಾಮೀಣ ಜನರು ಕಷ್ಟದ ಬದುಕಿನಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಲಾಗದು. ರೋಗ ಉಲ್ಬಣಗೊಂಡ ನಂತರ ಆಸ್ಪತ್ರೆಗಳಿಗೆ ತೆರಳುತ್ತಾರೆ. ಆಗ ಚಿಕಿತ್ಸೆ ಫಲಕಾರಿಯಾಗುವುದು ಕಡಿಮೆ. ಜತೆಗೆ ಚಿಕಿತ್ಸೆಯ ಖರ್ಚು ಅಧಿಕವಾಗುತ್ತದೆ. ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ತೆರಳಿ ಆರಂಭಿಕ ಹಂತದಲ್ಲೇ ವಿವಿಧ ರೋಗಗಳ ಪತ್ತೆಗೆ ಗೃಹಭಾಗ್ಯ ಯೋಜನೆ ಸಹಕಾರಿಯಾಗಿದೆ ಎನ್ನುತ್ತಾರೆ ವೈದ್ಯ ಡಾ.ಬಸವ ಮಂಜೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.