
ಶಿಡ್ಲಘಟ್ಟ: ಕುಂದಲಗುರ್ಕಿ ಗ್ರಾಮ ಪಂಚಾಯಿತಿಯು ಒಂದೇ ನಿವೇಶನವನ್ನು ಇಬ್ಬರಿಗೆ ನೀಡುವ ಮೂಲಕ ಇಬ್ಬರ ಮಧ್ಯೆ ಜಗಳ ತಂದಿಟ್ಟಿದೆ. ಅಲ್ಲದೆ, ಈ ನಿವೇಶನವು ಇದೀಗ ಇಬ್ಬರಿಗೂ ಇಲ್ಲದಂತೆ ಮಾಡಲಾಗಿದೆ ಎಂದು ಆರೋಪಿಸಿ ಅಂಗವಿಕಲ ಸಂತೋಷ್ ಕುಮಾರ್ ಅವರು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಗುರುವಾರದಿಂದ ಅನಿರ್ದಿಷ್ಠಾವಧಿ ಧರಣಿ ಆರಂಭಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮಹಾತ್ಮಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟುಕೊಂಡು ಒಬ್ಬಂಟಿಯಾಗಿ ಧರಣಿ ಆರಂಭಿಸಿದ್ದಾರೆ ಸಂತೋಷ್.
2013ರಲ್ಲಿ ಗ್ರಾಮ ಪಂಚಾಯಿತಿಯಿಂದ ಸಂತೋಷ್ ಕುಮಾರ್ ಅವರ ತಾಯಿ ಆಂಜಿನಮ್ಮ ಹೆಸರಿಗೆ ನಿವೇಶನ ಮಂಜೂರಾಗಿತ್ತು. ಇಂದಿರಾ ಆವಾಸ್ ವಸತಿ ಯೋಜನೆಯಡಿ ಮನೆ ಕೂಡ ಮಂಜೂರಾಗಿತ್ತು. ಆಂಜಿನಮ್ಮ ಅವರು ನಿವೇಶನದಲ್ಲಿ ಮನೆ ನಿರ್ಮಿಸಲು ಅಡಿಪಾಯ ಹಾಕಿ ಮೊದಲ ಬಿಲ್ ₹29,800 ಬಿಲ್ ಹಣ ಕೂಡ ಪಡೆದುಕೊಂಡಿದ್ದಾರೆ. ಆದರೆ, ಅದೇ ನಿವೇಶನ ತಮಗೆ ಮಂಜೂರು ಆಗಿದೆ ಎಂದು ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಪಂಚಾಯಿತಿಗೆ ದಾಖಲೆ ಸಲ್ಲಿಸಿದ್ದಾರೆ. ಇದರಿಂದ ಇಬ್ಬರ ನಡುವೆ ವಾದ–ವಿವಾದ ನಡೆದಿದೆ ಎಂದರು.
ಅಂತಿಮವಾಗಿ ಸಂತೋಷ್ ಕುಮಾರ್ ನಿರ್ಮಿಸಿದ್ದ ಅಡಿಪಾಯ ಕಿತ್ತು ಹಾಕಲಾಗಿದೆ. ಮನೆ ಕಟ್ಟಲು ಬಿಡುತ್ತಿಲ್ಲ. ಅಂದಿನಿಂದ ಇಂದಿನವರೆಗೆ ನಿವೇಶನಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದೆ. ಸಮಸ್ಯೆ ಬಗೆಹರಿಸಬೇಕಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸುಮ್ಮನಿದ್ದಾರೆ ಎಂದು ದೂರಿದರು.
ನನ್ನ ಕುಟುಂಬಕ್ಕೆ ನಿವೇಶನವನ್ನು ಪಕ್ಕಾ ಮಾಡಿಸಬೇಕು. ಇಲ್ಲವೇ ಬೇರೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಎದುರು ಧರಣಿ ಆರಂಭಿಸಿದ್ದಾಗಿ ಅಂಗವಿಕಲ ಸಂತೋಷ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.