ಗುಡಿಬಂಡೆ: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯ ಬಳಿ ಕೈವಾರ ತಾತಯ್ಯ ಹಾಗೂ ಹಾವಳಿ ಬೈರೇಗೌಡ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದಿತ ಜಾಗವನ್ನು ತಹಶೀಲ್ದಾರ್ ಸಿಗ್ಬತ್ತುಲ್ಲಾ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ನೊಂದಿಗೆ ಮರು ಸರ್ವೆ ಮಾಡಲಾಯಿತು.
ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂಭಾಗದ ಖಾಲಿ ಜಾಗದಲ್ಲಿ ತಿಂಗಳ ಹಿಂದೆಯಷ್ಟೆ ಬಲಿಜ ಸಂಘದಿಂದ ಕೈವಾರ ತಾತಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಆದರೆ ಅದೇ ಜಾಗದಲ್ಲಿ ಒಕ್ಕಲಿಗರ ಸಂಘವು ಹಾವಳಿ ಬೈರೇಗೌಡ ಪುತ್ಥಳಿ ನಿರ್ಮಾಣ ಮಾಡಬೇಕೆಂಬ ಒತ್ತಾಯಿಸಿದ್ದರು. ಸ್ಥಳದಲ್ಲಿ ಎರಡು ಸಮುದಾಯದ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಸಂಘರ್ಷಕ್ಕೆ ತಿರುಗಿತು. ಈ ಕಾರಣದಿಂದ ಆ ಜಾಗವನ್ನು ವಿವಾದಿತ ಜಾಗವೆಂದು ಪರಿಗಣಿಸಿ, ಯಾರು ಜಾಗದಲ್ಲಿ ಏನು ಮಾಡಬಾರದೆಂದು ನಿಷೇಧ ಹೇರಲಾಗಿತ್ತು.
ಬಳಿಕ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡೂ ಸಮುದಾಯಗಳ ಮುಖಂಡರ ಶಾಂತಿ ಸಭೆ ನಡೆಸಲಾಗಿತ್ತು. ನಂತರ ವಿವಾದಿತ ಜಾಗದ ಮರು ಸರ್ವೆ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.
ಜಿಲ್ಲಾಧಿಕಾರಿ ಆದೇಶದಂತೆ ಬುಧವಾರ ತಹಶೀಲ್ದಾರ್ ಸಿಗ್ಬತ್ತುಲ್ಲಾ ನೇತೃತ್ವದಲ್ಲಿ ಮರು ಸರ್ವೆ ಮಾಡಲಾಯಿತು.
ಸ್ಥಳದಲ್ಲೇ ವರದಿಯನ್ನು ಸಿದ್ಧಪಡಿಸಿ ಎರಡೂ ಸಮುದಾಯದವರಿಂದ ಸಹಿ ಪಡೆದು ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಲು ಸಿದ್ಧತೆ ಕಳುಹಿಸಲಾಗುವುದು ತಹಶೀಲ್ದಾರ್ ಸಿಗ್ಬತ್ತುಲ್ಲಾ ತಿಳಿಸಿದರು.
ಕಳೆದ ಒಂದು ತಿಂಗಳ ಹಿಂದೆ ಒಂದೇ ಜಾಗದಲ್ಲಿ ಎರಡು ಸಮುದಾಯದವರು ಪುತ್ಥಳಿ ನಿರ್ಮಾಣ ಮಾಡಲು ಮನವಿ ಮಾಡಿದ್ದರು. ನಂತರ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ವಿಚಾರವನ್ನು ಜಿಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ವಿವಾದ ಬಗೆಹರಿಸಲು ಸಮಿತಿಯೊಂದನ್ನು ರಚಿಸಿ ವಿವಾದಿತ ಜಾಗವನ್ನು ಮರು ಸರ್ವೆ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಆದೇಶದಂತೆ ಇದೀಗ ಸರ್ವೆ ಮಾಡಿಸಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದರು.
ಗುಡಿಬಂಡೆ ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.