ಬಾಗೇಪಲ್ಲಿ: ಪುರಸಭೆ ಕಚೇರಿಗೆ ಗುರುವಾರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅನಿರೀಕ್ಷಿತ ಭೇಟಿ ನೀಡಿ ಎ–ಖಾತೆ, ಬಿ–ಖಾತೆ ಅಭಿಯಾನದಲ್ಲಿ ಅರ್ಜಿಗಳ ಸ್ವೀಕಾರ, ವಿತರಣೆ, ಪರಿಷ್ಕರಣೆ ಬಗ್ಗೆ ಮಾಹಿತಿ ಪಡೆದರು.
ಪುರಸಭೆಯಲ್ಲಿ ಎ ಹಾಗೂ ಬಿ ಖಾತೆ ಒಟ್ಟು ಅರ್ಜಿಗಳು 3032 ಸ್ವೀಕೃತ ಆಗಿವೆ. ಈ ಪೈಕಿ 1280 ಅರ್ಜಿಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ. ಉಳಿದ 1752 ಅರ್ಜಿಗಳ ಪೈಕಿ 700 ಅರ್ಜಿಗಳು ಪ್ರಗತಿ ಹಂತದಲ್ಲಿ ಇದ್ದು, ಒಂದು ವಾರದೊಳಗೆ ಫಲಾನುಭವಿಗಳಿಗೆ ವಿತರಿಸಲಾಗುವುದು. ಉಳಿದ ಅರ್ಜಿಗಳು ಆನ್‍ಲೈನ್ ಪ್ರಗತಿ ಹಂತದಲ್ಲಿ ಆಗಬೇಕಾಗಿದೆ. ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾಹಿತಿ ನೀಡಿದರು.
ಕಂದಾಯ, ಆರೋಗ್ಯ, ಗಣಕ ಕೇಂದ್ರಗಳ ಕೊಠಡಿಗಳಿಗೆ ಭೇಟಿ ನೀಡಿದರು. ಸಾರ್ವಜನಿಕರು ಓಡಾಡುವ ಜಾಗದಲ್ಲಿ ದಾಖಲೆ ಇಡಲಾಗಿದೆ. ದಾಖಲೆಗಳು ಹೊರಗೆ ಇಡದಂತೆ ಕ್ರಮ ಕೈಗೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಹಾಗೂ ಲೆಕ್ಕಾಧಿಕಾರಿ ಶ್ರೀಧರ್, ಕಂದಾಯ ಅಧಿಕಾರಿ ಅತಾವುಲ್ಲಾ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಪಟ್ಟಣದ ಒಳಚರಂಡಿ ಕಲುಷಿತ ನೀರು ಚಿತ್ರಾವತಿ ನದಿಗೆ ಹರಿಸಿದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿ ಇದೆ. ಕಾಮಗಾರಿ ಮುಗಿದ ಬಳಿಕ ಚರಂಡಿ ನೀರು ಕಲುಷಿತ ನೀರಿನ ಘಟಕಕ್ಕೆ ಸರಬರಾಜು ಮಾಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಮುಖಂಡರಾದ ವೆಂಕಟಶಿವಾರೆಡ್ಡಿ ಹಾಗೂ ಮುಖಂಡರು ಮನವಿ ಸಲ್ಲಿಸಿದರು.
ತಹಶೀಲ್ದಾರ್ ಮನೀಷಾ ಎನ್.ಪತ್ರಿ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಶಿಶು ಕಲ್ಯಾಣ ಯೋಜನಾಧಿಕಾರಿ ರಾಮಚಂದ್ರ, ಕಂದಾಯ ಅಧಿಕಾರಿ ಅತಾವುಲ್ಲಾ, ಲೆಕ್ಕಾಧಿಕಾರಿ ಶ್ರೀಧರ್ ಹಾಗೂ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.