ಶಿಡ್ಲಘಟ್ಟ: ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಅಂಗನವಾಡಿ ಕಾರ್ಯಕರ್ತೆರೊಬ್ಬರು ಶಾಮೀಲಾಗಿದ್ದಾರೆ. ಅವರ ವಿರುದ್ಧ ದೂರು ದಾಖಲಾಗಿದ್ದು ಕ್ರಮ ಕೈಗೊಳ್ಳುವಂತೆ ರಾಮಲಿಂಗಾಪುರ ಗ್ರಾಮಸ್ಥರು ಸಿಡಿಪಿಒ ಅವರಿಗೆ ಮನವಿ ಸಲ್ಲಿಸಿದರು.
ನಗರದ ಸಿಡಿಪಿಒ ಕಚೇರಿಗೆ ಭೇಟಿ ನೀಡಿದ ರಾಮಲಿಂಗಾಪುರದ 50ಕ್ಕೂ ಹೆಚ್ಚು ಮಂದಿ, ಅಂಗನವಾಡಿ ಕಾರ್ಯಕರ್ತೆ ಕಲಾವತಿ ವಿರುದ್ದ ದಿಬ್ಬೂರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಗ್ರಾಮದ ನವವಿವಾಹಿತೆ ಶಿರಿಷಾ ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಇದರಲ್ಲಿ ಅವರ ಕೈವಾಡವೂ ಇದೆ ಎಂದು ದೂರಿದರು.
ಸರಿಯಾಗಿ ಅಂಗನವಾಡಿ ಕೇಂದ್ರಕ್ಕೆ ಬರುವುದಿಲ್ಲ. ಪೌಷ್ಟಿಕ ಆಹಾರ, ಕೋಳಿ ಮೊಟ್ಟೆ ಸೇರಿದಂತೆ ಇತರ ಪರಿಕರಗಳನ್ನು ಸಮಯಕ್ಕೆ ಸರಿಯಾಗಿ ಮತ್ತು ಅರ್ಹ ಫಲಾನುಭವಿಗಳಿಗೆ ವಿತರಿಸುತ್ತಿಲ್ಲ. ಆಹಾರ ಪದಾರ್ಥಗಳನ್ನು ಅಂಗನವಾಡಿ ಕೇಂದ್ರದ ಬದಲಿಗೆ ತಮ್ಮ ಸ್ವಂತ ಮನೆಯಲ್ಲಿ ದಾಸ್ತಾನು ಮಾಡಿಕೊಳ್ಳುತ್ತಾರೆ. ಇವೆಲ್ಲವನ್ನೂ ಪ್ರಶ್ನಿಸಿದರೆ ನಮ್ಮ ವಿರುದ್ದ ಪಿತೂರಿ ನಡೆಸುತ್ತಾರೆ ಎಂದು ಆರೋಪಿಸಿದರು.
ಅವರ ಮೇಲೆ ವಿವಿಧ ಕಾರಣಗಳಿಗೆ ಎರಡು ಮೂರು ದೂರು ದಾಖಲಾಗಿವೆ. ಅಂಗನವಾಡಿಗೂ ಸರಿಯಾಗಿ ಹಾಜರಾಗುವುದಿಲ್ಲ. ಇಲಾಖೆ ಮೇಲಧಿಕಾರಿಗಳಿಗೂ ಈ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಕೂಡಲೇ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಿಡಿಪಿಒ ವಿದ್ಯಾ ವಸ್ತ್ರದ್, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಅಗತ್ಯ ಕ್ರಮ ಜರುಗಿಸುತ್ತಾರೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದರು.
ಆರೋಪಗಳ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡುತ್ತೇನೆ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಜರುಗಿಸುತ್ತೇನೆಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.