ADVERTISEMENT

ಗೌರಿಬಿದನೂರು: ವಿಜ್ಞಾನ ಆಸಕ್ತರನ್ನು ಸೆಳೆಯುತ್ತಿರುವ ಡಾ. ಎಚ್.ಎನ್ ಪಾರ್ಕ್

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 7:30 IST
Last Updated 20 ಡಿಸೆಂಬರ್ 2025, 7:30 IST
<div class="paragraphs"><p>ಮಾನವ ವಿಕಾಸ ಗ್ಯಾಲರಿ</p></div>

ಮಾನವ ವಿಕಾಸ ಗ್ಯಾಲರಿ

   

ಗೌರಿಬಿದನೂರು: ವೈಜ್ಞಾನಿಕ ಚಿಂತನೆಗಳ ಹರಿಕಾರ ಡಾ. ಎಚ್. ನರಸಿಂಹಯ್ಯ ಅವರ ವೈಜ್ಞಾನಿಕ ಚಿಂತನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿವೆ. ಪ್ರಶ್ನೆಸದೆ ಒಪ್ಪಬೇಡಿ ಎಂಬ ಅವರ ಚಿಂತನೆಯು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ. ಅವರ ಸ್ಮರಣಾರ್ಥವಾಗಿ ಹೊಸೂರಿನ ಸಮೀಪ 132 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಡಾ.ಎಚ್. ನರಸಿಂಹಯ್ಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ವಿಜ್ಞಾನದ ಆಸಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಹಾಗೂ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಸಹಯೋಗದೊಂದಿಗೆ ಡಾ.ಎಚ್. ನರಸಿಂಹಯ್ಯ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ.

ADVERTISEMENT

ಪ್ರತಿನಿತ್ಯವು ಇಲ್ಲಿಗೆ ಭೇಟಿ ನೀಡುತ್ತಿರುವ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮೂಲ ವಿಜ್ಞಾನದ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ. ಜೊತೆಗೆ ಈ ವಿಜ್ಞಾನ ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿನ ವಿಜ್ಞಾನ ಕೇಂದ್ರದ ಕಟ್ಟಡವನ್ನು ರ‍್ಯಾಮ್ಮಡ್ ಅರ್ಥ್ ಗೋಡೆಗಳನ್ನು ಒಳಗೊಂಡ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿದೆ. ಈ ಕೇಂದ್ರವು ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲದೆ, ದೇಶದಲ್ಲಿಯೇ ವಿಶಿಷ್ಟ ವಿಜ್ಞಾನ–ಶೈಕ್ಷಣಿಕ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ವಿಜ್ಞಾನವನ್ನು ಕೇವಲ ಪಠ್ಯ ವಿಷಯವಾಗಿ ಅಷ್ಟೇ ಅಲ್ಲದೆ ಅನುಭವದ ಮೂಲಕ ಕರಿಯುವ ಪರಿಕಲ್ಪನೆಯೊಂದಿಗೆ ಈ ಕೇಂದ್ರ ಅಭಿವೃದ್ಧಿಪಡಿಸಲಾಗುತ್ತಿದೆ.

ಆವರಣದಲ್ಲಿ ಅನೇಕ ವಿಜ್ಞಾನ ಮಾದರಿ ಮತ್ತು ಪ್ರದರ್ಶಿಕೆಗಳ ಸೌಲಭ್ಯಗಳಿವೆ. ಮ್ಯಾಡ್ಸ್ ಪಾರ್ಕ್, ಸೌಂಡ್‌ಪಾರ್ಕ್ ಹಾಗೂ ಜಂತರ್–ಮಂತರ್ ಮಾದರಿಯ ಖಗೋಳ ವಿಜ್ಞಾನ ಉಪಕರಣಗಳನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಭೂಮಿಯ ಚಲನ, ಸೂರ್ಯನ ಸ್ಥಾನಮಾನ ಮತ್ತು ಕಾಲಮಾಪನದ ವಿಜ್ಞಾನವನ್ನು ನೇರ ಅನುಭವದ ಮೂಲಕ ತಿಳಿಯಲು ಸಾಧ್ಯವಾಗುತ್ತದೆ.

ಲಿಪಿಗಳ ಸಂಗ್ರಹಾಲಯ: ಅಂತರರಾಷ್ಟ್ರೀಯ ವಿಜ್ಞಾನ ಕೇಂದ್ರದ ಭಾಗವಾಗಿ ‘ಲಿಪಿ ಮನೆ’ ನಿರ್ಮಿಸಲಾಗುತ್ತಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಭಾರತ ಹಾಗೂ ವಿಶ್ವದ ವಿವಿಧ ಪ್ರಾಚೀನ ಮತ್ತು ಆಧುನಿಕ ಲಿಪಿಗಳ ಬೆಳವಣಿಗೆ, ಶಾಸನ, ವಿಜ್ಞಾನ ಬರವಣಿಗೆಯ ಮತ್ತು ಸಂಸ್ಕೃತಿಯ ಇತಿಹಾಸ ಪರಿಚಯಿಸುವ ಗುರಿ ಹೊಂದಲಾಗಿದೆ. ಇದು ವಿಜ್ಞಾನ, ಭಾಷೆ ಮತ್ತು ಸಂಸ್ಕೃತಿಯ ನಡುವಿನ ಸಂಬಂಧ ವಿವರಿಸುವ ವಿಶಿಷ್ಟ ಪ್ರಯತ್ನವಾಗಿದೆ.

ಒಳಾಂಗಣ ಕಟ್ಟಡದಲ್ಲಿ ಸುಸಜ್ಜಿತ ಅಡಿಟೋರಿಯಂ, ಗ್ರಂಥಾಲಯ, ಮಾನವನ ವಿಕಾಸ ಗ್ಯಾಲರಿ, ಸ್ಪೇಸ್ ಗ್ಯಾಲರಿ, ವಿನೋದ ವಿಜ್ಞಾನ ಗ್ಯಾಲರಿ ಮತ್ತು ಕಿರು ತಾರಾಲಯ ಸೌಲಭ್ಯಗಳನ್ನು ಹೊಂದಿದೆ.

ಇತ್ತೀಚೆಗೆ ರಾಜ್ಯ ಸರ್ಕಾರವು ಡಾ. ಎಚ್.ಎನ್ ಪ್ರಾಧಿಕಾರ ರಚನೆ ಮಾಡಿದ್ದು, ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ. ಈ ವಿಜ್ಞಾನ ಕೇಂದ್ರವು ಮುಂದಿನ ದಿನಗಳಲ್ಲಿ ರಾಜ್ಯ ಮಾತ್ರವಲ್ಲದೆ, ದೇಶದ ಪ್ರಮುಖ ವಿಜ್ಞಾನ-ಶೈಕ್ಷಣಿಕ ತಾಣವಾಗಲಿದೆ ಎಂಬ ವಿಶ್ವಾಸ ಮೂಡಿಸಿದೆ.

ಸರಳವಾಗಿ ಹೇಳಿಕೊಟ್ಟರೆ ವಿಜ್ಞಾನ ಬಲು ಸುಲಭ ಎಂಬ ಸಂಕಲ್ಪದೊಂದಿಗೆ ವಿಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗಿದೆ.

ರಂಗಮಂದಿರ, ಗೋಕುಂಟೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಪ್ರದೇಶವನ್ನು ವಿಜ್ಞಾನ, ಶಿಕ್ಷಣ, ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಸಮಗ್ರ ಕೇಂದ್ರವಾಗಿ ರೂಪಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಆಕರ್ಷಕ ಸೌಂಡ್ ಗಾರ್ಡನ್

ಇಲ್ಲಿನ ಸೌಂಡ್ ಗಾರ್ಡನ್ ಮಕ್ಕಳು ಮತ್ತು ಯುವಕರಿಗೆ ಅತ್ಯಂತ ಆಕರ್ಷಕ ತಾಣವಾಗಿದೆ. ಇಲ್ಲಿ ಲಿಥೋಫೋನ್, ಹಾರ್ಪ್, ಟ್ಯೂಬ್ಯುಲರ್ ಬೆಲ್ಸ್ ಸೇರಿದಂತೆ ಇನ್ನಿತರ ಸಂವಹನಾತ್ಮಕ ಧ್ವನಿ ಪ್ರದರ್ಶನಗಳಿವೆ. ಧ್ವನಿಯ ತರಂಗಗಳು, ಪ್ರತಿಧ್ವನಿ, ಆವೃತ್ತಿ, ಸ್ಪಂದನ ಇತ್ಯಾದಿ ತತ್ವಗಳನ್ನು ಆಡುತ್ತಲೇ ಕಲಿಯುವ ಅವಕಾಶ ಕಲ್ಪಿಸಲಾಗಿದೆ. 

ಸಾವಿರ ಅಂಕಿಗಳ ಪೈ–ಗಣಿತ ಉದ್ಯಾನ: ಮ್ಯಾಥಮ್ಯಾಟಿಕ್ಸ್ ಗಾರ್ಡನ್ ಈ ಕೇಂದ್ರದ ಹೆಮ್ಮೆ. ಇಲ್ಲಿ ಅಂಕಗಣಿತ ಕ್ರಮದಲ್ಲಿ ಪೈ ಸುಮಾರು 1,000 ಅಂಕಿ ಪ್ರದರ್ಶಿಸುವ ವಿನೂತನ ಗಣಿತ ಪ್ರದರ್ಶನ ಅಳವಡಿಸಲಾಗಿದೆ. ಇದರಿಂದ ಗಣಿತವನ್ನು ಭಯವಲ್ಲದೆ ಕುತೂಹಲದ ವಿಷಯವಾಗಿ ಪರಿವರ್ತಿಸಲಾಗಿದೆ. 

ಮಕ್ಕಳಲ್ಲಿ ವಿಜ್ಞಾನ ಆಸಕ್ತಿಗೆ ಸಹಕಾರಿ

ಯಾವುದೇ ಸಂಶೋಧನೆಗೆ ವಿಜ್ಞಾನವೇ ಮೂಲ. ಮಕ್ಕಳು ಅನುಭವದ ಮೂಲಕ ವಿಜ್ಞಾನದ ಮೂಲ ತಿಳಿಯಬೇಕು ಎಂಬುದು ಡಾ.ಎಚ್.ಎನ್. ಪಾರ್ಕ್ ಉದ್ದೇಶವಾಗಿದೆ. ಮಕ್ಕಳು ವಿಜ್ಞಾನದ ಮಾದರಿಗಳನ್ನು ಆಟವಾಡುತ್ತಾ ಕಲಿಯಬೇಕು. ವಿದೇಶಗಳಲ್ಲಿ ವಿಜ್ಞಾನಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ನಮ್ಮಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆಸಲು ವಿಜ್ಞಾನ ಪಾರ್ಕ್ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಡಿಆರ್‌ಡಿಒ ಮತ್ತು ಇಸ್ರೊ ಸಹಕಾರದಿಂದ ಔಟ್ ರಿಚ್ ಕೇಂದ್ರ ಪ್ರಾರಂಭಿಸಲಾಗುವುದು. ಈ ಮೂಲಕ ವಿಜ್ಞಾನ ಕೇಂದ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಯತ್ನ ಮಾಡಲಾಗುವುದು. 
– ಎನ್.ಎಚ್. ಶಿವಶಂಕರರೆಡ್ಡಿ, ಅಧ್ಯಕ್ಷ, ಎಚ್.ಎನ್. ಪ್ರಾಧಿಕಾರ 

ಲಾಲ್‌ಬಾಗ್ ರೀತಿ ಉದ್ಯಾನ ನಿರ್ಮಾಣ

ವಿಜ್ಞಾನ ಕೇಂದ್ರದ ನಿರ್ಮಾಣಕ್ಕೆ ಮೊದಲು ಕಡಿಮೆ ಜಾಗ ನಿಗದಿಪಡಿಸಲಾಗಿತ್ತು. ಇದೀಗ ಈ ಜಾಗದ ವಿಸ್ತೀರ್ಣವನ್ನು ಹೆಚ್ಚಿಸಲಾಗಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು. ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಂತೆ ನಿರ್ಮಿಸಲಾಗುವುದು. ಬೆಂಗಳೂರಿನಲ್ಲಿನ ಲಾಲ್ ಬಾಗ್ ರೀತಿ ಉದ್ಯಾನವನ ನಿರ್ಮಿಸುವ ಯೋಜನೆಯೂ ಇದೆ. 
– ಕೆ.ಎಚ್. ಪುಟ್ಟಸ್ವಾಮಿ ಗೌಡ, ಶಾಸಕ, ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.