ADVERTISEMENT

ಗುಡಿಬಂಡಿ: ಕೊರೊನಾ ಜಾಗೃತಿ ರಥಕ್ಕೆ ಚಾಲನೆ

ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಜಾಥಾ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 3:17 IST
Last Updated 3 ನವೆಂಬರ್ 2020, 3:17 IST
ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಕೋವಿಡ್-19 ತಡೆಗಟ್ಟಲು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ‘ಜಾಗೃತಿ ರಥಕ್ಕೆ’ ಗಣ್ಯರು ಚಾಲನೆ ನೀಡಿದರು
ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಕೋವಿಡ್-19 ತಡೆಗಟ್ಟಲು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ‘ಜಾಗೃತಿ ರಥಕ್ಕೆ’ ಗಣ್ಯರು ಚಾಲನೆ ನೀಡಿದರು   

ಗುಡಿಬಂಡೆ: ‘ಕೊರೊನಾ ಸೋಂಕು ತಡೆಗೆ ಜನರು ಸರ್ಕಾರದ ನಿಯಮಗಳನ್ನು ಪಾಲಿಸುವುದು ಅಗತ್ಯ. ಇಲ್ಲವಾದಲ್ಲಿ ಕೊರೊನಾ ತಡೆ ಅಸಾಧ್ಯ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳದಲ್ಲಿ ಜನರು ಮಾಸ್ಕ್ ಧರಿಸಬೇಕು’ ಎಂದು ತಹಸೀಲ್ದಾರ್ ಸಿಗ್ಬತ್ತುಲ್ಲಾ ಸಾರ್ವಜನಿಕರಿಗೆ ಸಲಹೆ ನೀಡಿದರು.

ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಹಯೋಗದಲ್ಲಿ ಕೋವಿಡ್-19 ತಡೆಗಟ್ಟಲು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ‘ಜಾಗೃತಿ ರಥಕ್ಕೆ’ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶವ್ಯಾಪಿ ಹರಡಿರುವ ಕೊರೊನಾ ಸೋಂಕು ಬಗ್ಗೆ ಜನರು ಭಯಕ್ಕೆ ಒಳಗಾಗಿರುವುದು ಸಾಮಾನ್ಯ. ಅದಕ್ಕಾಗಿ ಯಾವುದೇ ವಿಶೇಷ ಚಿಕಿತ್ಸೆ ಹಾಗೂ ಔಷಧಿ ಇಲ್ಲದೆ ಇರುವುದರಿಂದ ಒಂದಿಷ್ಟು ಮುನ್ನೆಚ್ಚರಿಕಾ ಕ್ರಮ ಅನುಸರಿಸಬೇಕಿದೆ. ಹಾಗಾಗಿ ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ನಿಯಮಾವಳಿಗಳನ್ನು ರೂಪಿಸಿದ್ದು ಅದರಂತೆ ಎಲ್ಲರೂ ನಡೆದುಕೊಳ್ಳಬೇಕು. ದಂಡ ವಿಧಿಸುತ್ತಾರೆ ಎಂಬ ಭಯದಿಂದ ಮಾಸ್ಕ್ ಧರಿಸುವುದನ್ನು ಬಿಟ್ಟು ಪ್ರತಿಯೊಬ್ಬರು ಜೀವ ರಕ್ಷಣೆಗಾಗಿ ನಿಯಮಗಳನ್ನು ಪಾಲನೆ ಮಾಡಿ’ ಎಂದು ತಿಳಿಸಿದರು.

ADVERTISEMENT

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರಸಿಂಹಮೂರ್ತಿ ಮಾತನಾಡಿ, ‘ಸೋಂಕು ಕಡಿಮೆಯಾಗುತ್ತಿದೆ ಎಂದು ಅಸಡ್ಡೆ ತೋರದೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸೋಂಕನ್ನು ನಿಯಂತ್ರಿಸುವ ಅನಿವಾರ್ಯತೆ ಇದೆ. ಇನ್ನೇನು ಚಳಿಗಾಲ ಸಹ ಆರಂಭವಾಗುತ್ತಿದ್ದು, ಸೋಂಕು ಹರಡುವ ಅಪಾಯ ಹೆಚ್ಚಿರುವುದರಿಂದ, ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ವೈರಸ್ ತನ್ನ ಎರಡನೇ ಹಂತದ ದಾಳಿಯನ್ನು ಪ್ರಾರಂಭಿಸಿದೆ. ಈ ಎರಡನೇ ದಾಳಿಯೂ ಇನ್ನೂ ಭಯಂಕರ ರೂಪ ತಾಳಿದ್ದು, ಹೆಚ್ಚಾಗಿ ಹಬ್ಬುತ್ತಿರುವ ರಾಷ್ಟ್ರಗಳನ್ನು ಲಾಕ್‌ಡೌನ್ ಸಹ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಗಂಭೀರತೆ ತಿಳಿದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ವಿಜಯಲಕ್ಷ್ಮೀ, ಡಾ. ಅಕ್ಷಯ್, ಗ್ರಾಮ ಲೆಕ್ಕಿಗ ಲಕ್ಷ್ಮೀನಾರಾ
ಯಣ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.