ಶಿಡ್ಲಘಟ್ಟ: ಭೂರಹಿತ ರೈತರಿಗೆ ಸರ್ಕಾರ ತ್ವರಿತವಾಗಿ ಭೂ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಆ.18ರ ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ತಾಲ್ಲೂಕು ಸಂಚಾಲಕ ಟಿ.ಎ.ಚಲಪತಿ ತಿಳಿಸಿದರು.
ಶಿಡ್ಲಘಟ್ಟದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೇಶನ ರಹಿತರಿಗೆ ನಿವೇಶನ, ಮನೆ ಇಲ್ಲದವರಿಗೆ ಮನೆ, ಭೂರಹಿತರಿಗೆ ಭೂ ಮಂಜೂರು ಮಾಡಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವುದರಲ್ಲಿ ದಸಂಸ ಮುಂಚೂಣಿಯಲ್ಲಿದೆ ಎಂದರು.
ನಗರದ ಹೃದಯಭಾಗದಲ್ಲಿ ಅಂಬೇಡ್ಕರ್ ಭವನ ಹಾಗೂ ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಸೇರಿದಂತೆ ವಿವಿಧೆಡೆ ದಲಿತರ ಸಮಸ್ಯೆ ಪರಿಹಾರವಾಗಿವೆ. ಆದರೆ ಕ್ಷೇತ್ರದಾದ್ಯಂತ ಇರುವ ಗ್ರಾ.ಪಂ ಗಳ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಅರ್ಹರ ಪಟ್ಟಿ ಸಿದ್ದಪಡಿಸಲಾಗಿದೆಯಾದರೂ ಅವರಿಗೆ ನೀಡಲು ಅಗತ್ಯವಿರುವ ಭೂ ಮಂಜೂರು ಪ್ರಕ್ರಿಯೆ ಈವರೆಗೂ ಆಗಿಲ್ಲ. ತ್ವರಿತವಾಗಿ ಭೂ ಮಂಜೂರು ಮಾಡಬೇಕು ಎಂದರು.
ದಲಿತ ಕಾಲೋನಿ ನಿವಾಸಿಗಳಿಗೆ ಮನೆಗಳ ಇ-ಸ್ವತ್ತು ಖಾತೆ ಮಾಡಿಕೊಡಬೇಕು. ಸಾಕಷ್ಟು ಹಳ್ಳಿಗಳಲ್ಲಿ ದಲಿತರಿಗೆ ಸ್ಮಶಾನ ಇಲ್ಲ. ಸ್ಮಶಾನ ಇದ್ದರೂ ಸರಿಯಾದ ದಾರಿ ಇಲ್ಲ. ಸೂಕ್ತ ಸ್ಮಶಾನದ ಸೌಲಭ್ಯ ಕಲ್ಪಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಕಚೇರಿ ಮುಂಭಾಗ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಘಟನಾ ಸಂಚಾಲಕ ಲಕ್ಕೇನಹಳ್ಳಿ ವೆಂಕಟೇಶ್, ಹುಜಗೂರು ವೆಂಕಟೇಶ್, ತಾಲ್ಲೂಕು ಮಹಿಳಾ ಸಂಚಾಲಕಿ ಶಶಿಕಲಾ ನರಸಿಂಹರಾಜು, ಸೊಣ್ಣಗಾನಹಳ್ಳಿ ವೆಂಕಟೇಶ್, ತುಮ್ಮನಹಳ್ಳಿ ಚನ್ನಕೇಶವ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.