ADVERTISEMENT

ಪರಿಸರ ಸ್ನೇಹಿ ಗಣಪ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 4:19 IST
Last Updated 9 ಸೆಪ್ಟೆಂಬರ್ 2021, 4:19 IST
ಚಿಕ್ಕಬಳ್ಳಾಪುರದ ಕೆ.ವಿ.ವೆಂಕಟಪತೆಪ್ಪ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಾದ ಗಗನ್ ದೀಪ್, ವಿದ್ವತ್, ಸೂರ್ಯಕಿರಣ್, ಚಿನ್ಮಯ್ ಸಿದ್ಧಪಡಿಸಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಗಣ್ಯರು ವೀಕ್ಷಿಸಿದರು
ಚಿಕ್ಕಬಳ್ಳಾಪುರದ ಕೆ.ವಿ.ವೆಂಕಟಪತೆಪ್ಪ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಾದ ಗಗನ್ ದೀಪ್, ವಿದ್ವತ್, ಸೂರ್ಯಕಿರಣ್, ಚಿನ್ಮಯ್ ಸಿದ್ಧಪಡಿಸಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಗಣ್ಯರು ವೀಕ್ಷಿಸಿದರು   

ಚಿಕ್ಕಬಳ್ಳಾಪುರ: ಪರಿಸರ ರಕ್ಷಿಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ರಸಾಯನಿಕಗಳಿಂದ ನಿರ್ಮಾಣ ಮಾಡಿದ ಗಣೇಶ ಮೂರ್ತಿಗಳ ಬದಲು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಜನರು ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮಾಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಭೈರಪ್ಪ ಶಿವಲಿಂಗ ನಾಯಿಕ ಹೇಳಿದರು.

ನಗರದ ಹೊರ ವಲಯದ ಕೆ.ವಿ.ವೆಂಕಟಪತೆಪ್ಪ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಖಾಸಗಿ ಹಾಗೂ ಸರ್ಕಾರಿ ಶಾಲೆಗಳು ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ವೀಕ್ಷಿಸಿ ಮಕ್ಕಳ ಸೃಜನಶೀಲ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪರಿಸರ ಸ್ನೇಹಿ ಗಣೇಶ ಪ್ರದರ್ಶನದಲ್ಲಿ ಮಕ್ಕಳು ಸ್ಥಳೀಯವಾಗಿ ಸಿಗುವ ಮಣ್ಣು, ವಿವಿಧ ಮರಗಿಡಗಳ ಬೀಜಗಳನ್ನು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿ ರಸಾಯನಿಕ ರಹಿತ ಮೂರ್ತಿಗಳನ್ನು ಮಾಡಿದ್ದಾರೆ. ಇದರಿಂದ ನಾವು ಮಕ್ಕಳಿಂದ ಪರಿಸರ ಜಾಗೃತಿ ಬಗ್ಗೆ ತಿಳಿಯಬೇಕಿದೆ ಎಂದರು.

ADVERTISEMENT

ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಈ ಬಾರಿ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಮೂರ್ತಿ ಪ್ರತಿಷ್ಠಾಪಿಸಬೇಕು. ಗಣೇಶೋತ್ಸವ ಸಮಿತಿಗಳು ಅಥವಾ ಮಂಡಳಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಗರ ಅಥವಾ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಆಯೋಜಕರು ಕೋವಿಡ್-19ರ ನೆಗಟಿವ್ ರಿಪೋರ್ಟ್ ಮತ್ತು ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ ಎಂದರು.

ಆಚರಣೆ ವೇಳೆ ಯಾವುದೇ ರೀತಿ ಸಾಂಸ್ಕೃತಿಕ, ಸಂಗೀತ, ನೃತ್ಯ ಡಿ.ಜೆ ಇನ್ನಿತರ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ. ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕೂ ಮೆರವಣಿಗೆಯನ್ನು ಮಾಡಬಾರದು. ಸರ್ಕಾರಿ ಅಥವಾ ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಕನಿಷ್ಠ ಜನಸಂಖ್ಯೆಯೊಂದಿಗೆ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ವಿಸರ್ಜಿಸಬೇಕು. ನಗರ ಪ್ರದೇಶಗಳಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹಾಗೂ ಗ್ರಾಮ ಮಟ್ಟದಲ್ಲಿ ಪಿಡಿಓಗಳು ಗಣೇಶ ವಿಜಸರ್ಜನೆಗೆ ಸೂಕ್ತ ಕ್ರಮ ವಹಿಸುತ್ತಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಮಕ್ಕಳ ಪರಿಸರ ಸ್ನೇಹಿ ಪ್ರದರ್ಶನವನ್ನು ವೀಕ್ಷಿಸಿ ಪರಿಸರ ಸ್ನೇಹಿಯಾಗಿ ನಾವು ಹೇಗಿರಬೇಕು ಎಂದು ಪ್ರದರ್ಶನದ ಮೂಲಕ ನೀವು ತಿಳಿಸಿ ಕೊಟ್ಟಿದ್ದೀರಿ. ಸ್ಥಳೀಯ ಮಣ್ಣು ಮತ್ತು ಮರಗಿಡಗಳ ಬೀಜಗಳಿಂದ ನಿರ್ಮಿತವಾದ ಈ ಮೂರ್ತಿಗಳನ್ನು ನಿಮ್ಮ ಮನೆಯ ಸುತ್ತಮುತ್ತ ವಿಸರ್ಜನೆ ಮಾಡಿ ಆ ಮೂರ್ತಿಗಳಲ್ಲಿ ಬೆಳೆದ ಗಿಡಮರಗಳನ್ನು ಪಾಲನೆ ಮಾಡಿ ಬೆಳೆಸಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಜಿಲ್ಲಾ ಅರಣ್ಯಾಧಿಕಾರಿ ಅರ್ಸಲನ್, ಆರ್‌ಎಫ್‌ಒ ಶ್ರೀಲಕ್ಷ್ಮಿ, ವೆಂಕಟಪತೆಪ್ಪ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ನವೀನ್ ಕಿರಣ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಮರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.