ADVERTISEMENT

ಚಿಕ್ಕಬಳ್ಳಾಪುರ: ಚುನಾವಣಾ ವೆಚ್ಚ, ದರ ನಿಗದಿಗೆ ಕ್ರಮ

ಚುನಾವಣಾ ವೆಚ್ಚ: ಪೂರ್ವಭಾವಿ ಸಭೆಯಲ್ಲಿ ಡಿ.ಸಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 9:15 IST
Last Updated 22 ಜನವರಿ 2023, 9:15 IST

ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಚುನಾವಣಾ ಸಂದರ್ಭದಲ್ಲಿ ಬಳಸುವ ವಾಹನ, ಕರಪತ್ರ, ಬ್ಯಾನರ್ ಸೇರಿದಂತೆ ಇನ್ನಿತರ ವಸ್ತುಗಳು ಮತ್ತು ಸೇವೆಗಳ ಚುನಾವಣಾ ವೆಚ್ಚ ಕುರಿತಂತೆ ಜಿಲ್ಲಾ ದರಪಟ್ಟಿಯನ್ನು ಸಿದ್ದಪಡಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣಾ ವೆಚ್ಚಗಳ ಕುರಿತ ಜಿಲ್ಲಾ ದರಪಟ್ಟಿ ಸಿದ್ದಪಡಿಸುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿನ 5 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು, ಪ್ರತಿನಿಧಿಗಳು ಮತ್ತು ಅಭ್ಯರ್ಥಿಗಳು ಚುನಾವಣಾ ಉದ್ದೇಶಕ್ಕೆ ಬಳಸುವ ಸಾಮಗ್ರಿಗಳಿಗೆ ದರ ನಿಗದಿಪಡಿಸುವ ಸಲುವಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.

ADVERTISEMENT

ಪ್ರಚಾರ ಸಾಮಗ್ರಿಗಳಾದ ಧ್ವನಿವರ್ಧಕ ಸಾಧನಗಳು, ಬ್ಯಾನರ್, ಕರಪತ್ರ, ಬಾವುಟ, ಫ್ಲೆಕ್ಸ್‌, ಪೋಸ್ಟರ್ ಗಳು, ವಾಹನಗಳ ಬಾಡಿಗೆ ದರ, ಊಟ, ವಸತಿ ವ್ಯವಸ್ಥೆಯ ದರ, ವಾಹನ ಚಾಲಕರು ಮತ್ತು ಇತರ ಸೇವೆಗಳ ದರ, ಪೀಠೋಪಕರಣಗಳ ದರ ಸೇರಿದಂತೆ ಚುನಾವಣೆ ನಿಮಿತ್ತ ಬಳಸುವ ವಸ್ತುಗಳು ಮತ್ತು ಸೇವೆಗಳ ಬಳಕೆಯ ದರ ನಿಗದಿ ಮಾಡುವ ಬಗ್ಗೆ ಅಧಿಕಾರಿಗಳಿ‌ಗೆ ಸೂಚನೆಗಳನ್ನು ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್, ಜಿಲ್ಲಾ ಖಜಾನೆಯ ಉಪನಿರ್ದೇಶಕ ಮಂಜುನಾಥ ಸ್ವಾಮಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸಿ.ಪಿ.ಎಂ ನ ಮುನಿಕೃಷ್ಣಪ್ಪ, ಬಿಜೆಪಿಯ ಲಕ್ಷ್ಮಿಪತಿ, ಜೆಡಿಎಸ್ ನ ನಾರಾಯಣಸ್ವಾಮಿ, ಕಾಂಗ್ರೆಸ್‌ನ ಮಧುಸೂದನ್, ಬಿ.ಎಸ್.ಪಿಯ ‌ಕಾಂತರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.