ADVERTISEMENT

Happy Engineers Day: ಮೇಲೂರು ರೇಷ್ಮೆ ಕಾರ್ಖಾನೆ ಹಿಂದಿನ ಕತೆ

ವಿಶ್ವೇಶ್ವರಯ್ಯ ಜನ್ಮದಿನ ಇಂದು

ಡಿ.ಜಿ.ಮಲ್ಲಿಕಾರ್ಜುನ
Published 15 ಸೆಪ್ಟೆಂಬರ್ 2022, 4:28 IST
Last Updated 15 ಸೆಪ್ಟೆಂಬರ್ 2022, 4:28 IST
ಮೇಲೂರು ಗ್ರಾಮಕ್ಕೆ 1952 ರಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಉದ್ಘಾಟಿಸಲು ಸರ್.ಎಂ.ವಿಶ್ವೇಶ್ವರಯ್ಯ ಆಗಮಿಸಿದ್ದರು(ಸಂಗ್ರಹ ಚಿತ್ರ)
ಮೇಲೂರು ಗ್ರಾಮಕ್ಕೆ 1952 ರಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಉದ್ಘಾಟಿಸಲು ಸರ್.ಎಂ.ವಿಶ್ವೇಶ್ವರಯ್ಯ ಆಗಮಿಸಿದ್ದರು(ಸಂಗ್ರಹ ಚಿತ್ರ)   

ಶಿಡ್ಲಘಟ್ಟ: ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಚಿಕ್ಕಬಳ್ಳಾಪುರದ ಹೆಮ್ಮೆಯ ಪುತ್ರ. ಅವರ ಜನ್ಮದಿನವನ್ನು ಎಂಜಿನಿಯರ್‌ಗಳ ದಿನ ಎಂದು ಆಚರಿಸಲಾಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1860 ಸೆ.15 ರಂದು ಜನಿಸಿದ ವಿಶ್ವೇಶ್ವರಯ್ಯ ‘ಭಾರತರತ್ನ’ ಪಡೆದ ಪ್ರಥಮ ಎಂಜಿನಿಯರ್‌. ಗ್ರಾಮೀಣರಿಗೆ ಉದ್ಯೋಗ ಸಿಗುವಂತೆ 1952ರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ರೇಷ್ಮೆ ಕಾರ್ಖಾನೆ ಸ್ಥಾಪಿಸಿದರು. ಅದನ್ನು ಸರ್‌ಎಂವಿ
ಉದ್ಘಾಟಿಸಿದ್ದರು.

ಮೇಲೂರಿನಿಂದ ಕಂಬದಹಳ್ಳಿಗೆ ಹೋಗುವ ರಸ್ತೆಯಲ್ಲಿ ಪ್ರಾರಂಭವಾದ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾದ ಮೊಟ್ಟಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ADVERTISEMENT

ಸುಮಾರು 70 ವರ್ಷದ ಹಿಂದೆಯೇ ದೂರದೃಷ್ಟಿಯುಳ್ಳ ಗ್ರಾಮೀಣ ಪ್ರಗತಿ ಯೋಜನೆಯನ್ನು ಅವರು ರೂಪಿಸಿದ್ದರು. ಇಲ್ಲಿನ ಭೂಮಿ ಮತ್ತು ಹವಾಗುಣ, ರೇಷ್ಮೆ ಗೂಡು ಹಾಗೂ ನೂಲು ತಯಾರಿಕೆಗೆ ಸೂಕ್ತವಾದುದು. ಹೀಗಾಗಿ ಇಲ್ಲಿನ ಜನ ಆರ್ಥಿಕ ಪ್ರಗತಿ ಹೊಂದಲೆಂದು ಅವರು ಕಿಸಾನ್ ಸಿಲ್ಕ್ ಇಂಡಸ್ಟ್ರಿ
ಪ್ರಾರಂಭಿಸಿದರು.

ಉಯಿಲು ಬರೆದಿಟ್ಟಿದ್ದರು

ವಿಶ್ವೇಶ್ವರಯ್ಯ ಅವರು ತಮ್ಮ ಅಂತ್ಯಕ್ರಿಯೆ ತಮ್ಮ ಹುಟ್ಟೂರಾದ ಮುದ್ದೇನಹಳ್ಳಿಯಲ್ಲಿ ನಡೆಯಬೇಕು. ಅದಕ್ಕಾಗಿ ತಮ್ಮದೇ ಹಣ ಉಪಯೋಗಿಸುವಂತೆ ತಿಳಿಸಿ ಉಯಿಲು ಬರೆದಿಟ್ಟಿದ್ದರು. 1962 ರ ಏಪ್ರಿಲ್ 14 ರಂದು ಮುದ್ದೇನಹಳ್ಳಿಯಲ್ಲಿ ವಿಶ್ವೇಶ್ವರಯ್ಯ ಅವರ ಸಾಕು ಮಗ ಎಂ.ಆರ್.ಕೃಷ್ಣಮೂರ್ತಿ ಚಿತೆಗೆ
ಅಗ್ನಿಸ್ಪರ್ಶ ಮಾಡಿದರು.

ಎಂ.ವಿ ಸ್ಮರಣಾರ್ಥ ಅಂಚೆ ಚೀಟಿ

1960ರ ಸೆಪ್ಟೆಂಬರ್ 15 ರಂದು ಸರ್.ಎಂ.ವಿ. ಅವರಿಗೆ ನೂರು ವರ್ಷ ತುಂಬಿದ ದಿನದಂದೇ ಕೇಂದ್ರ ಸರ್ಕಾರ ಅವರ ಗೌರವಾರ್ಥ ಅಂಚೆ ಚೀಟಿ ಹೊರತಂದಿತು. ವಿಶೇಷ ಅಂಚೆ ಚೀಟಿ ಸರಣಿಯಲ್ಲಿ ಕರ್ನಾಟಕಕ್ಕೆ ಲಭಿಸಿದ ಮೊದಲ ಅಂಚೆ ಚೀಟಿಯಿದು. ಎಂ.ವಿ ಅವರ 150 ನೇ ಜನ್ಮದಿನಾಚರಣೆ ಸಂದರ್ಭದಲ್ಲಿ(2010ರಲ್ಲಿ) ಅವರ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.