ADVERTISEMENT

ಶಿಕ್ಷಕ ವೃತ್ತಿ ತೊರೆದು ಪರಿಸರ ಜಾಗೃತಿಗಾಗಿ ಸೈಕಲ್‌ ಮೂಲಕ ದೇಶ ಸುತ್ತುವ ಚಾರ್ಲ್ಸ್‌

​ಪ್ರಜಾವಾಣಿ ವಾರ್ತೆ
Published 25 ಮೇ 2023, 13:32 IST
Last Updated 25 ಮೇ 2023, 13:32 IST
ಶಿಡ್ಲಘಟ್ಟಕ್ಕೆ ಆಗಮಿಸಿದ ಪರಿಸರ ಜಾಗೃತಿಗಾಗಿ ಸೈಕಲ್ನಲ್ಲಿ ದೇಶ ಸುತ್ತುವ ಚಾರ್ಲ್ಸ್ ಅವರನ್ನು ನಗರಸಭೆಯಿಂದ ಸ್ವಾಗತಿಸಿ ಶುಭ ಹಾರೈಸಲಾಯಿತು
ಶಿಡ್ಲಘಟ್ಟಕ್ಕೆ ಆಗಮಿಸಿದ ಪರಿಸರ ಜಾಗೃತಿಗಾಗಿ ಸೈಕಲ್ನಲ್ಲಿ ದೇಶ ಸುತ್ತುವ ಚಾರ್ಲ್ಸ್ ಅವರನ್ನು ನಗರಸಭೆಯಿಂದ ಸ್ವಾಗತಿಸಿ ಶುಭ ಹಾರೈಸಲಾಯಿತು   

ಶಿಡ್ಲಘಟ್ಟ: ಶಿಕ್ಷಕ ವೃತ್ತಿ ತೊರೆದು ಪರಿಸರ ಜಾಗೃತಿಗಾಗಿ ಸೈಕಲ್‌ನಲ್ಲಿ ದೇಶ ಸುತ್ತುವ ಚಾರ್ಲ್ಸ್‌ಗೆ ಶಿಡ್ಲಘಟ್ಟದಲ್ಲಿ ಸ್ವಾಗತ ನೀಡಲಾಯಿತು.

ತಮಿಳುನಾಡಿನ ನಾಮಕಲ್ ನಿವಾಸಿ 65 ವರ್ಷದ ಚಾರ್ಲ್ ಅನ್ಬು ಕಳೆದ ಏಳು ವರ್ಷಗಳಿಂದ ಸೈಕಲ್ ಮೂಲಕ 20 ರಾಜ್ಯದಲ್ಲಿ ಸಂಚರಿಸುತ್ತಿದ್ದಾರೆ. ವಿವಿಧ ಶಾಲೆಗಳಿಗೆ ಭೇಟಿಕೊಟ್ಟು 60 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಗಳನ್ನು ಸೈಕಲ್ ನಲ್ಲಿ ಕ್ರಮಿಸಿ ಗುರುವಾರ ಶಿಡ್ಲಘಟ್ಟಕ್ಕೆ ಆಗಮಿಸಿದ ಅವರನ್ನು ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಆರೋಗ್ಯ ನಿರೀಕ್ಷಕ ಮುರಳಿ ಸ್ವಾಗತಿಸಿದರು.

ಪರಿಸರ ಮಾಲಿನ್ಯ ಜಾಗೃತಿಯನ್ನು ಮೂಡಿಸಲು ಯಾತ್ರೆ ಮಾಡುತ್ತಿರುವ ಅನ್ಬು ಪರ್ಯಟನೆ ಬಗ್ಗೆ ವಿವರ ನೀಡಿ, ಈಗಾಗಲೇ 20 ರಾಜ್ಯಗಳಲ್ಲಿ ಪರ್ಯಟನೆ ಮುಗಿಸಿ ವಿವಿಧ ಶಾಲೆಗಳಿಗೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಸರ ಬಗ್ಗೆ ಜಾಗೃತಿ ಮೂಡಿಸಿದ್ದೇನೆ. 25 ವರ್ಷಗಳ ಹಿಂದೆ ಉಚಿತವಾಗಿ ಪ್ರಕೃತಿಯಿಂದ ದೊರೆಯುತ್ತಿದ್ದ ಕುಡಿಯುವ ನೀರು ಇಂದು ಲೀಟರಿಗೆ 20 ರೂಪಾಯಿ ಕೊಟ್ಟು ಕುಡಿಯುವಂತಹ ಸ್ಥಿತಿ ಬಂದಿದೆ. ಪ್ರಕೃತಿಯ ಮೇಲೆ ಮನುಷ್ಯ ಮಾಡುವ ದೌರ್ಜನ್ಯ ಇದೇ ರೀತಿ ಮುಂದುವರಿದರೆ ಭವಿಷ್ಯ ಊಹಿಸಲು ಅಸಾಧ್ಯ. ಇಂದಿನ ಜಾಗತಿಕ ಉಷ್ಣಾಂಶ ಮನುಷ್ಯನ ರೋಗಗಳಿಗೆ ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮುಂದಿನ ಜನಾಂಗವನ್ನು ರಕ್ಷಿಸಲು ನಾವು ಕಟಿಬದ್ಧರಾಗಿ ಬೇಕಾಗಿದೆ ಎಂದರು.

ADVERTISEMENT

ಸೈಕಲ್ ಬಳಸಿ ಪರಿಸರ ಉಳಿಸಿ ಎಂಬ ದ್ವೇಯವಾಕ್ಯದ ಮೂಲಕ ಸಂಚರಿಸುವ ಇವರು ನೂರರಲ್ಲಿ 20 ವಿದ್ಯಾರ್ಥಿಗಳಾದರೂ ನನ್ನ ಮಾತನ್ನು ಪಾಲಿಸಿದರೆ ಅದೇ ನನ್ನ ಜೀವಮಾನದ ಸಾರ್ಥಕತೆ ಎಂದು ಎಂದು ಹೇಳಿದರು. ನೇಪಾಳ ಗಡಿಯಲ್ಲಿ ಸಂಚರಿಸುವಾಗ ನಕ್ಸಲರ ಕಹಿಘಟನೆ ಬಿಟ್ಟರೆ ಎಲ್ಲಿಯೂ ಭಾಷೆ, ಆಹಾರ ತೊಡಕಾಗಲಿಲ್ಲ ಎಲ್ಲವೂ ನಿರಾತಂಕ ಅನ್ನುತ್ತಾರೆ ಅನ್ಬು. ಇನ್ನು ಎಂಟು ರಾಜ್ಯ ಗಳ ಪ್ರವಾಸದೊಂದಿಗೆ ದೇಶ ಪರ್ಯಟನೆ ಮಾಡಿದಂತಹ ಹೆಗ್ಗಳಿಕೆ ಪಾತ್ರರಾಗುವ ಅನ್ಬುರವರಿಗೆ ನಗರಸಭೆಯ ವತಿಯಿಂದ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ತಾವುಗಳು ಪರಿಸರ ಸಂರಕ್ಷಣೆಯ ಉದ್ದೇಶದಿಂದ ಪ್ರಾರಂಭಿಸಿರುವ ಮರುಬಳಕೆ ವಸ್ತುಗಳ ಸಂಗ್ರಹಣೆಯ ಬಗ್ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.