ADVERTISEMENT

ಶಿಡ್ಲಘಟ್ಟ | ದೀಪಾವಳಿ ಪರಿಸರ ಸ್ನೇಹಿಯಾಗಿರಲಿ: ಡಿವೈಎಸ್ಪಿ ಮುರಳಿಧರ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 3:01 IST
Last Updated 19 ಅಕ್ಟೋಬರ್ 2025, 3:01 IST
ಶಿಡ್ಲಘಟ್ಟದಲ್ಲಿ ಗರುಡಾದ್ರಿ ಶಾಲೆಯ ವಿದ್ಯಾರ್ಥಿಗಳು ಡಿವೈಎಸ್ಪಿ ಮುರಳಿಧರ್ ಮತ್ತು ತಹಶೀಲ್ದಾರ್ ಗಗನಸಿಂಧು ಅವರಿಗೆ ಮಣ್ಣಿನ ದೀಪ ನೀಡಿ, ಪಟಾಕಿ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಾ ಪ್ರಾರಂಭಿಸಿದರು
ಶಿಡ್ಲಘಟ್ಟದಲ್ಲಿ ಗರುಡಾದ್ರಿ ಶಾಲೆಯ ವಿದ್ಯಾರ್ಥಿಗಳು ಡಿವೈಎಸ್ಪಿ ಮುರಳಿಧರ್ ಮತ್ತು ತಹಶೀಲ್ದಾರ್ ಗಗನಸಿಂಧು ಅವರಿಗೆ ಮಣ್ಣಿನ ದೀಪ ನೀಡಿ, ಪಟಾಕಿ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಾ ಪ್ರಾರಂಭಿಸಿದರು   

ಶಿಡ್ಲಘಟ್ಟ: ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಣೆ ಮಾಡಬೇಕು. ಪಟಾಕಿ ಸಿಡಿಸುವುದರಿಂದಾಗುವ ಅನಾಹುತದ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಬೇಕು. ಜತೆಗೆ ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ತಿಳಿಹೇಳಬೇಕು ಎಂದು ಚಿಂತಾಮಣಿ ಉಪ ವಿಭಾಗ ಡಿವೈಎಸ್ಪಿ ಮುರಳಿಧರ್ ತಿಳಿಸಿದರು.

ನಗರದ ಗರುಡಾದ್ರಿ ಶಾಲೆಯ ವಿದ್ಯಾರ್ಥಿಗಳಿಂದ ಶನಿವಾರ ಆಯೋಜಿಸಿದ್ದ ಪಟಾಕಿ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಟಾಕಿ ಸಿಡಿಸುವುದರಿಂದ ಶಬ್ದಮಾಲಿನ್ಯ ಮತ್ತು ವಾಯು ಮಾಲಿನ್ಯದ ಜತೆಗೆ ಪಕ್ಷಿ-ಪ್ರಾಣಿ ಹಾಗೂ ಪರಿಸರಕ್ಕೆ ಧಕ್ಕೆಯುಂಟಾಗುತ್ತದೆ. ಅಂಧತ್ವದ ಅಪಾಯಗಳನ್ನು ಸೃಷ್ಟಿಸುವ ಪಟಾಕಿಯನ್ನು ಬಿಟ್ಟು ಪರಿಸರಸ್ನೇಹಿ ಹಾಗೂ ಹಸಿರು ದೀಪಾವಳಿ ಆಚರಿಸಲು ವಿದ್ಯಾರ್ಥಿಗಳು ಜಾಗೃತಿ ಆಂದೋಲನ ನಡೆಸುತ್ತಿದ್ದಾರೆ ಎಂದರು.

ADVERTISEMENT

ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಪರಿಸರ ಸ್ನೇಹಿ ದೀಪಾವಳಿ ಎಂದರೆ ಸಂತೋಷವನ್ನು ಕಡಿಮೆ ಮಾಡುವುದಲ್ಲ. ದೀಪಗಳನ್ನು ಹಚ್ಚುವುದು, ಸಿಹಿ ಹಂಚುವುದು ಮತ್ತು ಸಮುದಾಯದ ಬೆಳಕು ಚೆಲ್ಲುವ ಮೂಲಕ ದೀಪಾವಳಿ ಆಚರಿಸೋಣ. ಪಟಾಕಿಗಳನ್ನು ತ್ಯಜಿಸುವ ಮೂಲಕ ವಾಯು ಮತ್ತು ಶಬ್ದ ಮಾಲಿನ್ಯವನ್ನು ತಡೆಯೋಣ. ಮಣ್ಣಿನ ದೀಪ ಬಳಸಿ ಮನೆಯನ್ನು ಬೆಳಗಿಸಿ. ನಾವು ಪರಿಸರವನ್ನು ರಕ್ಷಿಸುವುದರ ಜೊತೆಗೆ ಹಬ್ಬದ ನಿಜವಾದ ಅರ್ಥವನ್ನು ಕಾಪಾಡಬಹುದು ಎಂದರು.

ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಶ್ರೀನಿವಾಸ್, ನಗರ ಠಾಣಾ ಪಿಎಸ್‌ಐ ವೇಣುಗೋಪಾಲ್, ಗುರುಡಾದ್ರಿ ಶಾಲಾ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.