ADVERTISEMENT

ಪರೀಕ್ಷೆ ಸುಸೂತ್ರ: 442 ವಿದ್ಯಾರ್ಥಿಗಳು ಗೈರು

ಸೋಂಕಿನ ಆತಂಕದ ನಡುವೆ ನಿರಾಳವಾಗಿ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ, 11,698 ವಿದ್ಯಾರ್ಥಿಗಳು ಹಾಜರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 13:51 IST
Last Updated 18 ಜೂನ್ 2020, 13:51 IST
ಚಿಕ್ಕಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆರೋಗ್ಯ ತಪಾಸಣೆಗೆ ಅಂತರ ಕಾಯ್ದುಕೊಂಡು ನಿಂತಿದ್ದ ವಿದ್ಯಾರ್ಥಿಗಳು
ಚಿಕ್ಕಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆರೋಗ್ಯ ತಪಾಸಣೆಗೆ ಅಂತರ ಕಾಯ್ದುಕೊಂಡು ನಿಂತಿದ್ದ ವಿದ್ಯಾರ್ಥಿಗಳು   

ಚಿಕ್ಕಬಳ್ಳಾಪುರ: ಕೊರೊನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಸೋಂಕಿನ ಆತಂಕದ ನಡುವೆಯೇ ಗುರುವಾರ ಜಿಲ್ಲೆಯ 22 ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆಯಿತು.

ಜಿಲ್ಲೆಯಲ್ಲಿ ಇಂಗ್ಲಿಷ್‌ ಪರೀಕ್ಷೆ 12,140 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 11,698 ವಿದ್ಯಾರ್ಥಿಗಳು ಕೇಂದ್ರಗಳಿಗೆ ಹಾಜರಾಗಿ ಪರೀಕ್ಷೆ ಬರೆದರು. 442 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾದರು.

ಗುರುವಾರ ಬೆಳಿಗ್ಗೆ 10.15 ರಿಂದ 1.30ರ ವರೆಗೆ ಪರೀಕ್ಷೆ ನಡೆಯಿತು. ಆದರೆ, ಕೊರೊನಾ ವೈರಸ್‌ ಸೋಂಕಿನ ಭೀತಿಯ ಕಾರಣಕ್ಕೆ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳ ಒಳಗೆ ಬಿಡುವ ಮೊದಲು ಆರೋಗ್ಯ ತಪಾಸಣೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿತ್ತು. ಹೀಗಾಗಿ, ವಿದ್ಯಾರ್ಥಿಗಳೆಲ್ಲ ಬೆಳಿಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರಗಳ ಮುಂದೆ ನೆರೆದಿದ್ದರು.

ADVERTISEMENT

ಚಿಕ್ಕಬಳ್ಳಾಪುರದಲ್ಲಿ 6, ಶಿಡ್ಲಘಟ್ಟ 2, ಚಿಂತಾಮಣಿ 6, ಗೌರಿಬಿದನೂರು 4, ಬಾಗೇಪಲ್ಲಿ 3, ಗುಡಿಬಂಡೆ 1 ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪ್ರತಿ ಕೇಂದ್ರದಲ್ಲೂ ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರಿನಿಂಗ್‌ ಸಾಧನದಿಂದ ಪರೀಕ್ಷಿಸಿಯೇ ಒಳಗೆ ಬಿಟ್ಟರು.

ಕೊರೊನಾ ವೈರಾಣು ಹಬ್ಬುವುದನ್ನು ತಡೆಯುವ ಉದ್ದೇಶದಿಂದ ವಿದ್ಯಾರ್ಥಿಗಳ ಮಧ್ಯೆ ದೈಹಿಕ ಅಂತರ ಕಾಪಾಡುವುದಕ್ಕೆ ಪ್ರತಿ ಬೆಂಚ್‌ನಲ್ಲಿ ಇಬ್ಬರಿಗೆ ಮಾತ್ರ ಸ್ಥಳಾವಕಾಶ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದ ಒಂದು ಸಾಮಾನ್ಯ ಕೊಠಡಿಯಲ್ಲಿ 12, ದೊಡ್ಡ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಲಾಗಿತ್ತು.

ಪರೀಕ್ಷಾ ಕೇಂದ್ರದಲ್ಲಿ ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ, ಕೈಗಳನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸುವಂತೆ ನಿಗಾ ವಹಿಸಿದ್ದರು. ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ಸೆಕ್ಷನ್ 144 ಜಾರಿ ಮಾಡಿ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷೆ ನಡೆಯುವ ಸಮಯದಂದು ಮುಚ್ಚಿಸಲಾಗಿತ್ತು.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಹೋಬಳಿ ಕೇಂದ್ರ ಮತ್ತು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿರುವ ಸ್ಥಳಗಳಿಂದ ಪರೀಕ್ಷಾ ಕೇಂದ್ರಗಳಿಗೆ 205 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ಸಾರಿಗೆ ವ್ಯವಸ್ಥೆ ಮೇಲ್ವಿಚಾರಣೆಗೆ ಪ್ರತಿ ರೂಟ್‌ಗೆ ಒಬ್ಬ ಮಾರ್ಗಾಧಿಕಾರಿ ನಿಯೋಜಿಸಲಾಗಿತ್ತು. ಜತೆಗೆ, ಪ್ರತಿ ತಾಲ್ಲೂಕಿಗೊಬ್ಬ ಪ್ರಾಂಶುಪಾಲರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು.

‘ಈ ಹಿಂದೆ ನಡೆದಿರುವ ಉಳಿದ ವಿಷಯಗಳ ಪರೀಕ್ಷೆಗೆ 400 ಕೊಠಡಿಗಳನ್ನು ಬಳಕೆ ಮಾಡಲಾಗಿತ್ತು. ಪ್ರಸ್ತುತ, ಅಂತರ ಕಾಪಾಡುವ ಉದ್ದೇಶಕ್ಕೆ 202 ಹೆಚ್ಚುವರಿ ಕೊಠಡಿಗಳು ಸೇರಿದಂತೆ 602 ಕೊಠಡಿಗಳನ್ನು ಪರೀಕ್ಷೆಗೆ ಬಳಕೆ ಮಾಡಿಕೊಳ್ಳಲಾಯಿತು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಹಂಗಾಮಿ ಉಪನಿರ್ದೇಶಕ ಎನ್.ಆನಂದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.