ADVERTISEMENT

ಬಾಗೇಪಲ್ಲಿ: ಪುಳಕದ ಜತೆ ಹೋರಾಟದ ಮೆಲುಕು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 5:30 IST
Last Updated 20 ನವೆಂಬರ್ 2021, 5:30 IST
ಬಾಗೇಪಲ್ಲಿ ಪಟ್ಟಣದ ಹೊರವಲಯದ ಟಿ.ಬಿ.ಕ್ರಾಸ್‌ನಲ್ಲಿ 2021ರ ಜನವರಿ 26ರಂದು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆ
ಬಾಗೇಪಲ್ಲಿ ಪಟ್ಟಣದ ಹೊರವಲಯದ ಟಿ.ಬಿ.ಕ್ರಾಸ್‌ನಲ್ಲಿ 2021ರ ಜನವರಿ 26ರಂದು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆ   

ಬಾಗೇಪಲ್ಲಿ: ಕೃಷಿ ಭೂಸುಧಾರಣಾ, ಭೂಸ್ವಾಧೀನ ಹಾಗೂ ವಿದ್ಯುತ್ ಕಾಯ್ದೆಗಳ ತಿದ್ದುಪಡಿ ಮಾಡಬೇಕು ಎಂದು ನವದೆಹಲಿಯ ಗಡಿ ಭಾಗದಲ್ಲಿ ರೈತರ ಹೋರಾಟಕ್ಕೆ ಬೆಂಬಲಕ್ಕೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ತಾಲ್ಲೂಕಿನಲ್ಲಿ ರೈತ, ದಲಿತ, ಕನ್ನಡ, ಪ್ರಗತಿಪರ, ಮಹಿಳಾ ವಿದ್ಯಾರ್ಥಿ ಸಂಘಟನೆಗಳು ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಬಂದ್, ಪ್ರತಿಭಟನೆ, ಜನಾಂದೋಲನ ಹಾಗೂ ಜಾಗೃತಿ ಸಭೆಗಳನ್ನು ಮಾಡಿದ್ದಾರೆ.

ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರ ಹೋರಾಟಕ್ಕೆ ಬೆಂಬಲಿಸಿ ರಾಜಕೀಯ, ಕೃಷಿ, ಕೂಲಿಕಾರ್ಮಿಕರ, ಮಹಿಳಾ, ಪ್ರಗತಿಪರ ಸಂಘಟನೆಗಳು ಬೀದಿಗಿಳಿದು ಹೋರಾಟ, ಟ್ರ್ಯಾಕ್ಟರ್, ಬೈಕ್ ರ‍್ಯಾಲಿ, ಬಂದ್, ರಾಜ್ಯ ಹಾಗೂ ಹೆದ್ದಾರಿಗಳನ್ನು ತಡೆದಿದ್ದಾರೆ. 2021ರ ಜನವರಿ 26ರಂದು ರೈತರ ಹೋರಾಟ ಬೆಂಬಲಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳು ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಪ್ರತಿಭಟನೆ ಮಾಡಲು ಟ್ರಾಕ್ಟರ್‌ಗಳಲ್ಲಿ ಮುಂದಾಗಿದ್ದರು. ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಿದ್ದರು.

ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಪಟ್ಟಣದ ಬಸ್ ನಿಲ್ದಾಣದ ಮುಂದೆ, ಹೋಬಳಿಯ ಪಾತಪಾಳ್ಯ, ಮಿಟ್ಟೇಮರಿ, ಗೂಳೂರು, ಚೇಳೂರು, ಕಸಬಾಗಳ ಗ್ರಾಮೀಣ ಪ್ರದೇಶಗಳಲ್ಲಿ ರೈತರು ರಸ್ತೆಗಳನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ. ತಾಲ್ಲೂಕಿನ ಸಿಪಿಎಂ, ಕಾಂಗ್ರೆಸ್, ಜೆಡಿಎಸ್, ರೈತ ಸಂಘ, ಪ್ರಾಂತ ರೈತ ಸಂಘ, ಕೃಷಿಕೂಲಿಕಾರರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ಪ್ರಜಾ ಸಂಘರ್ಷ ಸಮಿತಿ, ಕನ್ನಡ, ಪ್ರಗತಿಪರ, ದಲಿತ ಪರ ಸಂಘಟನೆಗಳ ಮುಖಂಡರು ಪ್ರತಿ ಮನೆಗೆ ಹೋಗಿ ರೈತ ಮುಖಂಡರು, ಕಾಯ್ದೆಗಳ ಜಾರಿ ಆದರೆ ಮುಂದಾಗುವ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸಿದ್ದರು.

ADVERTISEMENT

‘ಕೃಷಿ ಕಾಯ್ದೆಗಳು ರೈತರಿಗೆ ಮಾರಕ ಆಗಿದ್ದರೂ, ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿತ್ತು. ಕಾಯ್ದೆಗಳನ್ನು ವಾಪಸ್ ಪಡೆಯುವವರಿಗೂ ರೈತರು ಹೋರಾಟ ನಿಲ್ಲಿಸಿಲ್ಲ. ಒಂದು ವರ್ಷದ ರೈತರ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ. ಕೂಡಲೇ ಕಾಯ್ದೆಗಳನ್ನು ವಾಪಸ್ ಪಡೆದಿರುವ ಬಗ್ಗೆ ಅಧಿಕೃತವಾಗಿ ಪ್ರಕಟಿಸಬೇಕು’ ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಪಿ.ಮಂಜುನಾಥರೆಡ್ಡಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.