ADVERTISEMENT

ಚಿಂತಾಮಣಿ: ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಪಡಿಸಿ

ರೈತರಿಗೆ ಆಯೋಜಿಸಿದ್ದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 14:11 IST
Last Updated 7 ಫೆಬ್ರುವರಿ 2024, 14:11 IST
ಚಿಂತಾಮಣಿ ತಾಲ್ಲೂಕಿನ ಕತ್ತರಿಗುಪ್ಪೆ ಗ್ರಾಮದಲ್ಲಿ ಬುಧವಾರ ನಡೆದ ಕಾರ್ಯಾಗಾರದಲ್ಲಿ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು
ಚಿಂತಾಮಣಿ ತಾಲ್ಲೂಕಿನ ಕತ್ತರಿಗುಪ್ಪೆ ಗ್ರಾಮದಲ್ಲಿ ಬುಧವಾರ ನಡೆದ ಕಾರ್ಯಾಗಾರದಲ್ಲಿ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು   

ಚಿಂತಾಮಣಿ: ‘ಸರ್ಕಾರಗಳು ರೈತರ ಉತ್ಪನ್ನಗಳಿಗೆ ಡಾ.ಸ್ವಾಮಿನಾಥನ್ ವರದಿ ಆಧಾರ ಅಥವಾ ಮಾನದಂಡವನ್ನಾಗಿ ಪರಿಗಣಿಸಿ ಬೆಂಬಲ ಬೆಲೆ ನಿಗದಿ ಮಾಡುತ್ತಿಲ್ಲ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.

ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಕತ್ತರಿಗುಪ್ಪೆ ಗ್ರಾಮದ ಬಳಿ ಬುಧವಾರ ರೈತಸಂಘ ಮತ್ತು ಹಸಿರುಸೇನೆಯ ತಾಲ್ಲೂಕು ಘಟಕ ಆಯೋಜಿಸಿದ್ದ ರೈತರ ಕಾರ್ಯಾಗಾರದಲ್ಲಿ ಮಾತನಾಡಿದರು.

‘ರಾಗಿ, ಜೋಳ, ಭತ್ತ ಸೇರಿದಂತೆ ಎಲ್ಲ ಉತ್ಪನ್ನಗಳ ಉತ್ಪಾದನಾ ವೆಚ್ಚಕ್ಕೆ, ಅದರ ಅರ್ಧದಷ್ಟು ನಷ್ಟವನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುದೇ ಡಾ.ಸ್ವಾಮಿನಾಥನ್ ವರದಿ. ಭೂಮಿಯನ್ನು ಹದ ಮಾಡುವುದು, ಬಿತ್ತನೆ ಮಾಡಿ ಬೆಳೆ ಬೆಳೆಸಿ ನಂತರ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವವರೆಗೆ ಆಗುವ ವೆಚ್ಚವನ್ನು ಉತ್ಪಾದನಾ ವೆಚ್ಚವನ್ನಾಗಿ ವರದಿಯಲ್ಲಿ ತಿಳಿಸಿದೆ. ದೇಶದಲ್ಲಿ ಯಾವುದೇ ಸರ್ಕಾರ ಡಾ.ಸ್ವಾಮಿನಾಥ್ ವರದಿಯ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತಿಲ್ಲ’ ಎಂದರು.

ADVERTISEMENT

ಅನ್ನ, ಹಾಲು, ಹಣ್ಣು, ಮೊಟ್ಟೆ, ಮಾಂಸ ಕೊಡುವವರು ರೈತರು. ಕೃಷಿಯ ಮೇಲೆ ಎಲ್ಲರು ಅವಲಂಬಿತರಾಗಿದ್ದಾರೆ. ಎಲ್ಲ ಕ್ಷೇತ್ರಗಳು ಕೃಷಿಯ ಮೇಲೆ ನಿಂತಿವೆ. ಇತ್ತೀಚೆಗೆ ಕೃಷಿಯ ತಳ ಅಲುಗಾಡುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ಅನ್ನದಾತರು, ಮತದಾರರು ದೊಡ್ಡಪ್ರಭುಗಳು ಎಂಬುದನ್ನು ಗಟ್ಟಿಮಾಡಬೇಕು. ಸರ್ಕಾರದ ತೆರಿಗೆಯಿಂದ ಯಾರು ಹಣವನ್ನು ಪಡೆಯುತ್ತಾರೋ ಅವರು ಸರ್ಕಾರದ ಗುಲಾಮರು. ಇಂದಿನ ಸಮಾಜದಲ್ಲಿ ಅದು ತದ್ವಿರುದ್ಧವಾಗಿದೆ. ರೈತರು, ಮತದಾರರು ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಸಲಾಂ ಹೊಡೆಯುವಂತಾಗಿರುವುದು ವಿಷಾದನೀಯ’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಮಾತನಾಡಿ, ಇಡೀ ಭಾರತದಲ್ಲಿ ತೋಟಗಾರಿಕೆಗೆ ಬೇರೆ ಇಲಾಖೆ ಇರುವುದು ಕರ್ನಾಟದಲ್ಲಿ ಮಾತ್ರ. ಇದಕ್ಕೆ ಡಾ.ಎಂ.ಎಚ್.ಮರಿಗೌಡರು ಕಾರಣ. ತಾಲ್ಲೂಕು ಪಂಚಾಯಿತಿಯಿಂದ ಕಾನೂನುಬದ್ಧವಾಗಿ ರೈತರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸೀಕಲ್ ರಮಣಾರೆಡ್ಡಿ ಮಾತನಾಡಿ, ‘ರೈತರು ಇಂಧನ ಇಲಾಖೆ ಮತ್ತು ಅರಣ್ಯ ಇಲಾಖೆಯಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡುವ ಹಿನ್ನೆಲೆಯಲ್ಲಿ ಫೆಬ್ರುವರಿ 14ರ ಬುಧವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ರಾಜ್ಯ ಸಂಘದ ಕಾರ್ಯಾಧ್ಯಕ್ಷ ಮಂಜುನಾಥಗೌಡ, ಮಹಿಳಾ ಸಂಚಾಲಕಿ ಸಿ.ಉಮಾ, ತಾಲ್ಲೂಕು ಘಟಕದ ದಿದ್ದುನಾರಾಯಣಸ್ವಾಮಿ, ಎಂ.ಎಲ್.ಆಂಜನೇಯರೆಡ್ಡಿ, ಕೆ.ವಿ.ವೆಂಕಟಸ್ವಾಮಿರೆಡ್ಡಿ, ಪಾಲುನಾರಾಯಣಸ್ವಾಮಿ, ಆಂಜನೇಯರೆಡ್ಡಿ, ರೈತ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.