ADVERTISEMENT

ಯೂರಿಯಾಕ್ಕಾಗಿ ರೈತರ ಪರದಾಟ

ಟಿಎಪಿಸಿಎಂಎಸ್ ಮಳಿಗೆ ಮುಂದೆ ನಿತ್ಯವೂ ಸಾಲು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 17:09 IST
Last Updated 3 ಸೆಪ್ಟೆಂಬರ್ 2020, 17:09 IST
ಗುಡಿಬಂಡೆ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಟ ಸಹಕಾರ ಸಂಘದ ಬಳಿ ಯೂರಿಯಾಕ್ಕಾಗಿ ರೈತರು ಸಾಲುಗಟ್ಟಿರುವುದು
ಗುಡಿಬಂಡೆ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಟ ಸಹಕಾರ ಸಂಘದ ಬಳಿ ಯೂರಿಯಾಕ್ಕಾಗಿ ರೈತರು ಸಾಲುಗಟ್ಟಿರುವುದು   

ಗುಡಿಬಂಡೆ: ಯೂರಿಯಾ ರಸಗೊಬ್ಬರಕ್ಕಾಗಿ ತಾಲ್ಲೂಕಿನ ರೈತರು ಪರದಾಡುತ್ತಿದ್ದಾರೆ. ಪಟ್ಟಣದ ಮಾರುತಿ ವೃತ್ತದ ಟಿಎಪಿಸಿಎಂಎಸ್ ಮಳಿಗೆಗೆ ಯೂರಿಯಾ ರಸಗೊಬ್ಬರ ಸರಬರಾಜು ಆಗಿದೆ ಎಂದು ಮಹಿಳೆಯರು, ಮಕ್ಕಳು ಮುಂಜಾನೆಯಿಂದಲೇ ಸರದಿಯಲ್ಲಿ ನಿಂತು ಒಂದು ಮೊಟೆ ಯೂರಿಯಾ ಖರೀದಿಸುತ್ತಿದ್ದಾರೆ. ಒಂದು ಮೂಟೆ ಗೊಬ್ಬರಕ್ಕೆ ದಿನಪೂರ್ತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.

ಜೋಳ ಹಾಗೂ ರಾಗಿಗೆ ಯೂರಿಯಾ ಗೊಬ್ಬರ ನೀಡಬೇಕಾಗಿದೆ. ಈ ಮೊದಲೇ ಯೂರಿಯಾ ದಾಸ್ತಾನು ಮಾಡಿಕೊಳ್ಳದ ಕಾರಣ ಬೇಡಿಕೆ ಹೆಚ್ಚಾಗಿದೆ. ಗೊಬ್ಬರಕ್ಕಾಗಿ ರೈತರು ರಂಗಾಲಾಗಿದ್ದಾರೆ. ರೈತರಿಗೆ ಸಮರ್ಪಕವಾಗಿ ಗೊಬ್ಬರ ನೀಡದಿದ್ದರೆ ಕೃಷಿ ಇಲಾಖೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘಟನೆಗಳು ಎಚ್ಚರಿಸಿವೆ.

‘ತಾಲ್ಲೂಕಿನಲ್ಲಿ ಸಮೃದ್ಧ ಮಳೆಯಾಗಿದೆ. ಶೇ 90.6ರಷ್ಟು ಬಿತ್ತನೆಯಾಗಿದೆ. ಆ. 13ರಿಂದ ಈವರೆಗೆ 225 ಟನ್ ಯೂರಿಯಾ ಸರಬರಾಜು ಆಗಿದೆ. ಆದರೂ, ರೈತರು ಅಗತ್ಯಕ್ಕಿಂತ ಹೆಚ್ಚಾಗಿ ಯೂರಿಯಾ ಬಳಕೆ ಮಾಡುತ್ತಿರುವುದರಿಂದ ಕೊರತೆ ಕಾಡುತ್ತಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೇಶವರೆಡ್ಡಿ ತಿಳಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಈಗಾಗಲೇ 9,826 ಹೆಕ್ಟೇರ್‌ನಲ್ಲಿ ರಾಗಿ, ಜೋಳ ಬಿತ್ತನೆಯಾಗಿವೆ. ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ 250 ಟನ್ ಯೂರಿಯಾ ಅಗತ್ಯವಿದೆ. ಖಾಸಗಿ ಅಂಗಡಿಗಳ ಮೂಲಕ 90 ಟನ್, ಟಿಎಪಿಸಿಎಂಎಸ್ ಮೂಲಕ 135 ಟನ್ ಗೊಬ್ಬರವನ್ನು 4 ಸಾವಿರ ರೈತರು ಖರೀದಿ ಮಾಡಿದ್ದಾರೆ ಎಂದರು.

ಉಳಿದ 25 ಟನ್ ಸರಬರಾಜಿಗೆ ಅನುಮತಿ ನೀಡಲಾಗಿದೆ. ಸರ್ಕಾರ ರಿಯಾಯಿತಿ ದರದಲ್ಲಿ ಯೂರಿಯಾ ಮಾರಾಟ ಮಾಡುತ್ತಿರುವುದರಿಂದ ಖಾಸಗಿ ಅಂಗಡಿಗಳು ಗೊಬ್ಬರ ಮಾರಾಟ ಮಾಡಲು ನಿರಾಸಕ್ತಿ ತೊರುತ್ತಿವೆ. ಟಿಎಪಿಸಿಎಂಎಸ್ ಬಳಿ ರೈತರು ಯೂರಿಯಾ ಖರೀದಿಗೆ ಮುಗಿಬಿದ್ದಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಮುಖಂಡ ಹಳೇಗುಡಿಬಂಡೆ ಲಕ್ಷ್ಮಿನಾರಾಯಣ ಮಾತನಾಡಿ, ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಅಸಮರ್ಪಕ ಉತ್ತರ ನೀಡುತ್ತಾರೆ. ತಕ್ಷಣವೇ ರೈತರಿಗೆ ಗೊಬ್ಬರ ದೊರೆಯಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.