ADVERTISEMENT

ಶಿಡ್ಲಘಟ್ಟ | ಯಂತ್ರಗಳ ಮೊರೆ: ಮೂಲೆ ಗುಂಪಾದ ರೋಣ ಗಲ್ಲುಗಳು

ಡಿ.ಜಿ.ಮಲ್ಲಿಕಾರ್ಜುನ
Published 29 ಜನವರಿ 2024, 7:17 IST
Last Updated 29 ಜನವರಿ 2024, 7:17 IST
ಶಿಡ್ಲಘಟ್ಟ ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿರುವ ರೋಣ ಗಲ್ಲುಗಳು
ಶಿಡ್ಲಘಟ್ಟ ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿರುವ ರೋಣ ಗಲ್ಲುಗಳು   

ಶಿಡ್ಲಘಟ್ಟ: ಸಂಕ್ರಾಂತಿ ಹತ್ತಿರವಾದಂತೆ ಸುಗ್ಗಿ ಸಂಭ್ರಮದ ಆಚರಣೆಗಳು ಕಣ್ಮುಂದೆ ಬರುತ್ತವೆ. ಕಣವೆಂಬುದು ಸುಗ್ಗಿ ಸಂಭ್ರಮ ಹಾಗೂ ರೈತರ ಪಾಲಿನ ಹಿಗ್ಗಿನ ಜಾಗವಾಗಿತ್ತು.

ಕಣ ಮಾಡುವಾಗ ಹಾಡುಗಳೊಂದಿಗೆ ಸುಗ್ಗಿ ನಡೆಯುತ್ತಿತ್ತು. ಈಗ ಕಣ ಕಣ್ಮರೆಯಾಗಿದೆ. ಕಾಳು ರಾಶಿ, ಕಣ ಕಟ್ಟಲು ಸಹಾಯ ಮಾಡಿದವರಿಗೆ ಊಟ ಹಾಕುವುದು, ಭಕ್ತಿ ಭಾವಗಳಿಂದ ರೋಣಗಲ್ಲು, ಮೇಟಿ, ರಾಶಿಗೆ ನಮಿಸುವುದು ಮರೆಯಾಗಿದೆ. ರೋಣಗಲ್ಲು ಅನಾಥವಾಗಿದ್ದು, ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ಗತಕಾಲದ ನೆನಪು ಸಾರುವ ರೋಣಗಲ್ಲುಗಳು ಮೂಲೆ ಗುಂಪಾಗಿವೆ.

ಕಾಲ ಬದಲಾದಂತೆ ಕೃಷಿಯಲ್ಲಿ ರೈತರು ತಾಂತ್ರಿ ಅಳವಡಿಸಿಕೊಳ್ಳುತ್ತಿದ್ದಾರೆ. ಕೂಲಿಯಾಳುಗಳ ಅಭಾವ ಹಾಗೂ ಹವಾಮಾನ ವೈಪರೀತ್ಯದಿಂದ ತೆನೆಗಳಿಂದ ರಾಗಿ ಕಾಳು ಬೇರ್ಪಡಿಸಲು ಈಚೆಗೆ ಯಂತ್ರಗಳ ಸಹಾಯ ಪಡೆದುಕೊಳ್ಳುತ್ತಿದ್ದು, ರೋಣ ಗಲ್ಲುಗಳು ಮೂಲೆ ಸೇರಿವೆ.

ADVERTISEMENT

ಹಿಂದೆ ಸಂಕ್ರಾಂತಿ ಕಳೆಯುತ್ತಿದ್ದಂತೆಯೇ ಎಲ್ಲೆಡೆ ಕಣಗಳು ಕಂಡು ಬರುತ್ತಿದ್ದವು. ಕಣ ಸಿದ್ಧಪಡಿಸುವುದೇ ಒಂದು ಸಂಪ್ರದಾಯ. ರೈತರಿಗೆ ಅದೊಂದು ಶಿಸ್ತಿನ ಕಾಯಕ. ಕನಿಷ್ಠ 8 ರಿಂದ 10 ಮಂದಿ ರೈತರು ಒಗ್ಗಟ್ಟಾಗಿ ಒಬ್ಬರ ಜಮೀನಿನಲ್ಲಿ ಜಾಗವನ್ನು ಆಯ್ದು ಕಣ ಸಿದ್ಧಪಡಿಸುತ್ತಿದ್ದರು. ಜಾಗದಲ್ಲಿರುವ ಕಳೆಯನ್ನು ಚೆಕ್ಕಿ, ನೀರು ಹಾಕಿ ನೆನೆಸಿ ಎತ್ತು ಬಂಡಿ ಕಟ್ಟಿ ತುಳಿಸಬೇಕು. ನಂತರ ಎಟ್ಟ ಹೊಡೆಸಿ ಸಮತಟ್ಟು ಮಾಡಬೇಕು. ಒಣಗಿದ ಮೇಲೆ ಸಗಣಿಯಿಂದ ಸಾರಿಸಿದರೆ ಕಣ ಸಿದ್ಧ. ನಂತರ ರಾಗಿ ಕಟ್ಟುಗಳನ್ನು ತಂದು ಗುಂಡು ಕಟ್ಟಿ ಹೊಡೆಯುತ್ತಿದ್ದರು.

ಆದರೆ, ಈಗ ನೀರು ಮತ್ತು ಎತ್ತುಗಳಿಲ್ಲ. ಕೆಲವೆಡೆ ರಾಜಕೀಯವಾಗಿ ಗ್ರಾಮಗಳು ಒಡೆದಿವೆ. ರೈತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿರುವುದರಿಂದ ಕೆಲಸದ ಒಗ್ಗಟ್ಟು ಕಳೆದುಕೊಂಡಿವೆ. ಯಂತ್ರಗಳು ಜನರ ದುಡಿಮೆಯನ್ನು ಕಿತ್ತುಕೊಂಡಿವೆ. ಇದರಿಂದ ಕಣಗಳು ಸಿಮೆಂಟ್ ರಸ್ತೆಗಳಾಗಿದ್ದು, ರೋಣ ಗಲ್ಲುಗಳು ಮೂಲೆ ಸೇರಿವೆ.

ಹಳ್ಳಿಗಳಲ್ಲಿ ಕಣ ಮಾಡುವ ಸಂಪ್ರದಾಯ ಈಗ ಮರೆಯಾಗಿದೆ. ಕೆಲ ವರ್ಷಗಳ ಹಿಂದೆ ರಸ್ತೆಯಲ್ಲಿ ರಾಗಿ ಹಾಕುತ್ತಿದ್ದರು. ಈಗ ಯಂತ್ರಗಳು ಬಂದಿದ್ದು, ಕೂಲಿಯಳು ಹಾಗೂ ಗಾಳಿ ಇಲ್ಲದಿದ್ದರೂ ರಾಗಿ ಮಾಡಿಕೊಳ್ಳುತ್ತಾರೆ. ಇದರಿಂದ ಸ್ವಚ್ಛತೆ, ಸಾಗಿಸುವುದು, ಗುಡ್ಡೆ ಹಾಕುವುದು, ಕಣ ಮಾಡುವ ಕಷ್ಟ ತಪ್ಪಿದೆ ಎಂಬುದು ರೈತ ಮಂಜುನಾಥ್ ಮಾತಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನ ಹಳೇಹಳ್ಳಿ ಗ್ರಾಮದಲ್ಲಿ ಕಣದಲ್ಲಿ ಎತ್ತಿಗೆ ಗುಂಡುಕಟ್ಟಿ ಕಾಳುಮಾಡುವ ದೃಶ್ಯ(ಸಂಗ್ರಹ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.