ADVERTISEMENT

ತುಂಬಿದ ಕೆರೆ, ಕುಂಟೆ: ರೈತರಿಗೆ ಹರ್ಷ

ಗುಡಿಬಂಡೆ ತಾಲ್ಲೂಕಿನಲ್ಲಿ ವಾಡಿಕೆಗಿಂತ ನಾಲ್ಕುಪಟ್ಟು ಹೆಚ್ಚು ಮಳೆ

ಜೆ.ವೆಂಕಟರಾಯಪ್ಪ
Published 28 ಜುಲೈ 2022, 4:58 IST
Last Updated 28 ಜುಲೈ 2022, 4:58 IST
ಗುಡಿಬಂಡೆಯಿಂದ ಗೌರಿಬಿದನೂರು ಕಡೆ ಹೋಗುವ ರಸ್ತೆಯಲ್ಲಿನ ರೈತರೊಬ್ಬರ ಕಲ್ಲುಕಟ್ಟಡದ ಬಾವಿ ನೀರಿನಿಂದ ತುಂಬಿದೆ
ಗುಡಿಬಂಡೆಯಿಂದ ಗೌರಿಬಿದನೂರು ಕಡೆ ಹೋಗುವ ರಸ್ತೆಯಲ್ಲಿನ ರೈತರೊಬ್ಬರ ಕಲ್ಲುಕಟ್ಟಡದ ಬಾವಿ ನೀರಿನಿಂದ ತುಂಬಿದೆ   

ಗುಡಿಬಂಡೆ: ಎರಡು ವರ್ಷಗಳಲ್ಲಿ ತಾಲ್ಲೂಕಿನಲ್ಲಿ ವಾಡಿಕೆ ಮಳೆಗಿಂತ ನಾಲ್ಕ ಪಟ್ಟು ಮಳೆಯಾಗಿದೆ. ಇದರಿಂದ ಕೆರೆ, ಕುಂಟೆ, ಬಾವಿ, ಕೊಳವೆ ಬಾವಿಗಳು ತುಂಬಿ ತುಳಕುತ್ತಿದೆ. ಅಂತರ್ಜಲ ವೃದ್ಧಿಯಾಗಿ ಬೆಟ್ಟಗುಡ್ಡದ ಪ್ರದೇಶದಲ್ಲಿ ಜೌಗು ಪ್ರದೇಶದಲ್ಲಿನ ಜಮೀನು ಭತ್ತದ ಗದ್ದೆಗಳಾಗಿ ಮಾರ್ಪಟ್ಟಿದೆ.

ಈ ಭಾಗದಲ್ಲಿ ನದಿ ನಾಲೆಗಳು ಇಲ್ಲ. ದಶಕಗಳಿಂದ ಮಳೆ ಬರದೆ ಬರಗಾಲ ಪ್ರದೇಶವಾಗಿ, ಕುಡಿಯುವ ನೀರಿಗೆ ಹಾಗೂ ಕೃಷಿಗೆ ಕೊಳವೆ ಬಾವಿಗಳಿಗೆ ಮುಂದಾಗಿ 1,500 ಅಡಿ ಕೊರೆದರೂ ನೀರು ಸಿಗುವುದು ಒಂದು ಕಾಲದಲ್ಲಿ ಕಷ್ಟಕರವಾಗಿತ್ತು. ಜನರು ಪ್ಲೋರೋಸಿಸ್ ಕಾಯಿಲೆಗೆ ತುತ್ತಾಗಿದ್ದರು.

2021ರಿಂದ ಸತತ ಮಳೆಯಿಂದ, ಕೊಳವೆ ಬಾವಿಗಳಲ್ಲಿ 300 ರಿಂದ 500 ಅಡಿಯಲ್ಲಿ ನೀರು ಸಿಗುತ್ತಿದೆ. ಕೆರೆ, ಕುಂಟೆಗಳು, ಕಲ್ಲುಕಟ್ಟಡಗಳಿಂದ ಕೂಡಿದ ಬಾವಿಗಳಲ್ಲಿ ನೀರು ಶೇಖರಣೆಯಾಗಿದೆ. ದಶಕಗಳಿಂದಬತ್ತಿಹೋಗಿದ್ದ 40 ಕೊಳವೆ ಬಾವಿಗಳಲ್ಲಿ ನೀರು ಮರುಶೇಖರಣೆಯಾಗಿದೆ.

ADVERTISEMENT

ತಾಲ್ಲೂಕಿನಲ್ಲಿ 8 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 121 ಗ್ರಾಮಗಳಿದ್ದು ಪ್ರಸ್ತುತ 143 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ ಉಲ್ಲೋಡು ವ್ಯಾಪ್ತಿಯಲ್ಲಿ 18, ಬೀಚಗಾನಹಳ್ಳಿ 22, ವರ್ಲಕೊಂಡ 20, ಸೋಮೇನಹಳ್ಳಿ 30, ತಿರುಮಣಿ 16, ಹಂಪಸಂದ್ರ 22, ಎಲ್ಲೋಡು 20, ದಪ್ಪರ್ತಿ 15 ಕೊಳವೆ ಬಾವಿಗಳಿಂದ ನೀರು ಸರಬರಾಜು ಅಗುತ್ತಿದೆ. ಬರಗಾಲದಲ್ಲಿ ಪ್ರತಿ ವರ್ಷ ಕೊಳವೆ ಬಾವಿಗಳುಬತ್ತಿಹೋಗಿ ಹೊಸದಾಗಿ 50 ಕೊಳವೆ ಬಾವಿಗಳನ್ನು ಕೊರೆಸಬೇಕಾಗಿತ್ತು. ಈಗ ಅಂತರ್ಜಲ ವೃದ್ಧಿಯಿಂದ ಹೊಸ ಕೊಳವೆ ಬಾವಿ ಅವಶ್ಯಕತೆ ಇಲ್ಲ.

ಪಟ್ಟಣದ ಅಮಾನಿಬೈರಸಾಗರ ಕೆರೆಯ ನೀರು ಶೇಖರಣೆ ಮಾಡಲಾಗಿದೆ. ಈ ನೀರನ್ನು ಕೃಷಿ ಬಳಕೆಗೆ ನಿಷೇಧ ಮಾಡಲಾಗಿದೆ. ಇದು ತಾಲ್ಲೂಕು ವ್ಯಾಪ್ತಿಯಲ್ಲಿ ದೊಡ್ಡ ಕೆರೆಯಾಗಿದೆ. ಈ ನೀರನ್ನು ಜಲಜೀವನ್ ಮಿಷನ್ ಯೋಜನೆಯಲ್ಲಿ ಅಳವಡಿಸಿಕೊಂಡು ಉಲ್ಲೋಡು, ಎಲ್ಲೋಡು, ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 28 ಹಳ್ಳಿಗಳಿಗೆ ಕುಡಿಯುವ ನೀರಿನ ಸರಬರಾಜಿಗೆ ಸರ್ಕಾರ ₹15 ಕೋಟಿ ಬಿಡುಗಡೆ ಮಾಡಿದೆ. ಪ್ರತಿಯೊಂದು ಗ್ರಾಮಕ್ಕೂ ಈ ಯೋಜನೆಯಲ್ಲಿ ಪ್ರತಿ ಕೊಳವೆ ಬಾವಿಗಳಿಂದ ಶುದ್ಧ ನೀರಿನ ಪ್ಲಾಂಟ್ ನಿರ್ಮಿಸಿ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ನೀಡುವ ಯೋಜನೆ ಸಿದ್ಧವಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಪ್ರಭಾರಿ ಎಇಇ ಎಸ್.ಎನ್.ನವೀನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.