ಚಿಕ್ಕಬಳ್ಳಾಪುರ: ಇತ್ತೀಚೆಗಷ್ಟೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಡಾ.ಕೆ.ಸುಧಾಕರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವೈದ್ಯಕೀಯ ಶಿಕ್ಷಣ ಖಾತೆ ನೀಡಿದ್ದಾರೆ. ಆ ಮೂಲಕ ಸುಧಾಕರ್ ಅವರ ಖಾತೆ ಕುರಿತು ಕ್ಷೇತ್ರದಲ್ಲಿ ಈವರೆಗೆ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಬಿದ್ದಿದೆ. ಈ ಮೂಲಕ ಸುಧಾಕರ್ ಅವರ ಆಸೆ ಕೊನೆಗೂ ಕೈಗೂಡಿದಂತಾಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೂರನೇ ಬಾರಿಗೆ ವಿರೋಚಿತವಾಗಿ ಗೆಲುವು ಸಾಧಿಸಿದ್ದ ಸುಧಾಕರ್ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಯಾವ ಖಾತೆ ಸಿಗಬಹುದು ಎಂಬ ಲೆಕ್ಕಾಚಾರಗಳು ಮೊನ್ನೆಯವರೆಗೂ ಚರ್ಚೆಗೆ ಎಡೆ ಮಾಡಿದ್ದವು.
ಅತ್ತ ರಾಜಧಾನಿಯಲ್ಲಿ ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆ, ಖಾತೆ ಮರು ಹಂಚಿಕೆ ವಿಚಾರವಾಗಿ ಕರಸತ್ತು ನಡೆಸಿದ್ದರೆ, ಇತ್ತ ಜಿಲ್ಲೆಯಲ್ಲಿ ಸುಧಾಕರ್ ಅವರ ಬೆಂಬಲಿಗರು ಮತ್ತು ಬಿಜೆಪಿ ಪಾಳೆಯದಲ್ಲಿ ಸುಧಾಕರ್ ಅವರು ಯಾವ ಖಾತೆ ಸಚಿವರಾಗಬಹುದು ಎಂಬ ಕುತೂಹಲ ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿ, ಇಂಧನ ಖಾತೆ, ವೈದ್ಯಕೀಯ ಶಿಕ್ಷಣ ಖಾತೆ ಸೇರಿದಂತೆ ಹಲವು ಖಾತೆಗಳ ವಿಚಾರವಾಗಿ ವದಂತಿಗಳನ್ನು ಹುಟ್ಟು ಹಾಕಿತ್ತು.
ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿ ವಿಫಲರಾಗಿದ್ದ ಸುಧಾಕರ್ ಅವರು, ಆ ಸರ್ಕಾರ ಪತನಗೊಳಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬೆನ್ನಲ್ಲೇ ಅವರ ‘ವರ್ಚಸ್ಸು’ ಗಗನಮುಖಿಯಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸರ್ಕಾರ ಭದ್ರಪಡಿಸಲು ನೆರವಾದ ಸುಧಾಕರ್ ಅವರಿಗೆ ತಮ್ಮ ಸಂಪುಟದಲ್ಲಿ ಮುಖ್ಯ ಖಾತೆಯೊಂದನ್ನು ನೀಡಲಿದ್ದಾರೆ ಎಂದು ಅವರು ಬೆಂಬಲಿಗರು ಆಶಾಭಾವನೆ ವ್ಯಕ್ತಪಡಿಸುತ್ತಿದ್ದರು. ಅದೀಗ ನಿಜವಾಗಿದೆ.
ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಬಳಿ ಹೆಚ್ಚುವರಿಯಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ವೈದ್ಯಕೀಯ ಪದವೀಧರರಾಗಿರುವ ಸುಧಾಕರ್ ಅವರಿಗೆ ಹಂಚಿಕೆ ಮಾಡುವ ಮೂಲಕ, ತಮ್ಮ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಸುಧಾಕರ್ ಅವರಿಗೆ ಉತ್ತಮ ಉಡುಗೊರೆ ನೀಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ತ್ವರಿತಗತಿಯಲ್ಲಿ ತಲೆ ಎತ್ತಲಿದೆ ಎಂದು ಅವರ ಬೆಂಬಲಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸುಧಾಕರ್ ಅವರು ಈ ಹಿಂದಿನ ಸಮ್ಮಿಶ್ರ ಸರ್ಕಾರದ ಆರಂಭದಿಂದ ಪತನದ ವರೆಗೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರನ್ನೇ ಗುರಿಯಾಗಿರಿಸಿಕೊಂಡು ಪದೇ ಪದೇ ನೀಡಿದ ಇರುಸು ಮುರುಸು ಉಂಟು ಮಾಡುವಂತಹ ಹೇಳಿಕೆಗಳ ಮೂಲಕ ಗಮನ ಸೆಳೆಯುತ್ತ ಬಂದಿದ್ದರು.
ಕುಮಾರಸ್ವಾಮಿ ಅವರು ಆರಂಭದಲ್ಲಿ ಸುಧಾಕರ್ ಅವರಿಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರನ್ನಾಗಿ ನೇಮಕ ಮಾಡಲು ನಿರಾಕರಿಸಿ ಮತ್ತಷ್ಟು ರೊಚ್ಚಿಗೆಬ್ಬಿಸಿದ್ದರು. ರಾಜಕೀಯ ಪರಿಸ್ಥಿತಿ ಹದಗೆಡುತ್ತಿದ್ದಂತೆ ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ಮಾಡಿದರೂ ಸುಧಾಕರ್ ಅವರಿಗೆ ಆ ಹುದ್ದೆಯಲ್ಲಿ ಮುಂದುವರಿಯಲು ಆಗಿರಲಿಲ್ಲ. ಇದೀಗ ಸಚಿವರಾಗುವ ಮೂಲಕ ಸುಧಾಕರ್ ಅವರು ತಮ್ಮ ರಾಜಕೀಯ ಎದುರಾಳಿಗಳ ಎದುರು ಮೇಲುಗೈ ಸಾಧಿಸಿದ್ದಾರೆ.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಜಿಲ್ಲೆಯ ಹೊಣೆಗಾರಿಕೆಯನ್ನು ರಾಮನಗರ ಜಿಲ್ಲಾ ಉಸ್ತುವಾರಿ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಹಂಗಾಮಿಯಾಗಿ ನೀಡಲಾಗಿದೆ. ಅದು ಕೂಡ ಈಗ ಸಚಿವ ಸ್ಥಾನದ ಜತೆಗೆ ಸುಧಾಕರ್ ಅವರ ಹೆಗಲೇರಲಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.