ADVERTISEMENT

ಚಿಕ್ಕಬಳ್ಳಾಪುರ: ಹೈಕೋರ್ಟ್ ಅಂಗಳಕ್ಕೆ ಹೂ ಮಾರುಕಟ್ಟೆ ವಿವಾದ

ವಿವರಣೆ ನೀಡುವಂತೆ ಸರ್ಕಾರಿ ವಕೀಲರಿಗೆ ತಾಕೀತು; ಎಪಿಎಂಸಿ ಕಾರ್ಯದರ್ಶಿ, ಡಿಸಿ, ಎಸ್‌ಪಿ ಪ್ರತಿವಾದಿಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 4 ಫೆಬ್ರುವರಿ 2022, 19:30 IST
Last Updated 4 ಫೆಬ್ರುವರಿ 2022, 19:30 IST
   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಯ ವಿವಾದ ಹೈಕೋರ್ಟ್ ಅಂಗಳ ತಲುಪಿದೆ. ಇಲ್ಲಿಯವರೆಗೂ ಈ ವಿಚಾರ ಜಿಲ್ಲಾ ಕೇಂದ್ರದಲ್ಲಿ ಪ್ರಮುಖವಾಗಿ ಚರ್ಚೆಯ ವಿಷಯವಾಗಿತ್ತು. ಆಗಾಗ್ಗೆ ವಿವಾದ ಭುಗಿಲೆದ್ದು ಪ್ರತಿಭಟನೆಯ ರೂಪು ಪಡೆಯುತ್ತಿತ್ತು. ಈಗ ವಿವಾದವು ಹೈಕೋರ್ಟ್ ಮುಟ್ಟಿದ್ದು ಜಿಲ್ಲೆಯ ರೈತರು ಸೇರಿದಂತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

’ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಕೋವಿಡ್ ನೆಪದಲ್ಲಿ ಬೆಳೆಗಾರರ ಹೂ ಮಾರಾಟಕ್ಕೆ ಅನುಮತಿ ನೀಡದೆ ಅಡ್ಡಿಪಡಿಸಲಾಗುತ್ತಿದೆ’ ಎಂದು ಆಕ್ಷೇಪಿಸಿ ಎಪಿಎಂಸಿಯಲ್ಲಿ ಹೂ ಮಾರಾಟ ಮಳಿಗೆ ಹೊಂದಿರುವ ಎಸ್.ಕ್ಯಾತಪ್ಪಣ್ಣ, ಶ್ರೀಧರ್, ರಮೇಶ್ ರೆಡ್ಡಿ ಮತ್ತಿತರರುಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಈ ಬಗ್ಗೆ ವಿಚಾರಣೆ ನಡೆಸಿತು.

’ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಆಲೂಗಡ್ಡೆ ಮಾರಾಟಗಾರರಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಹೂವು ಬೆಳೆಗಾರರಿಗೆ ಮಾತ್ರ ರಾಜಕೀಯ ಕಾರಣಗಳಿಗಾಗಿ ವ್ಯಾಪಾರ ನಡೆಸಲು ಅವಕಾಶ ನೀಡುತ್ತಿಲ್ಲ. ಆದ್ದರಿಂದ, ಕೂಡಲೇ ಜಿಲ್ಲೆಯ ಹೂವು ಮಾರಾಟಗಾರರಿಗೆ ಹೂವು ಮಾರಾಟ ಮಾಡಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು‘ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ADVERTISEMENT

ಈ ಬಗ್ಗೆ ಸರ್ಕಾರಿ ವಕೀಲರು ವಿವರಣೆ ನೀಡುವಂತೆ ತಾಕೀತು ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದೆ. ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಎಪಿಎಂಸಿ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಎಪಿಎಂಸಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಚಿಕ್ಕಬಳ್ಳಾಪುರ ಎಪಿಎಂಸಿ ಒಟ್ಟು 29.31 ಎಕರೆ ಇದೆ. ಎಪಿಎಂಸಿಯಲ್ಲಿ ದನದ ವಹಿವಾಟು ನಡೆಸುವ ಜಾಗ ಸಹ ಖಾಲಿ ಇದೆ. ಇಲ್ಲಿಯೂ ಹೂ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವುದು ಹೂ ವರ್ತಕರು ಮತ್ತು ಹೂ ಬೆಳೆಗಾರರ ಆಗ್ರಹವಾಗಿದೆ.

ರಾಜಕೀಯ ಸುರುಳಿ:’ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವು ಮಾರಾಟಗಾರರಿಗೆ ನಿರ್ಬಂಧ ಹೇರಲಾಗಿತ್ತು. ಈಗ ನಿರ್ಬಂಧ ಸಡಿಲಿಕೆ ಆಗಿದ್ದರೂ ಸ್ಥಳೀಯ ಶಾಸಕರೂ ಆದ ಸಚಿವ ಡಾ.ಕೆ.ಸುಧಾಕರ ಅವರ ರಾಜಕೀಯ ಒತ್ತಡದಿಂದಾಗಿ ಇನ್ನೂ ಮಾರಾಟಕ್ಕೆ ಅನುಮತಿ ನೀಡದೆ ಸತಾಯಿಸಲಾಗುತ್ತಿದೆ‘ ಎಂದುಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್‌ ವಿಚಾರಣೆ ವೇಳೆ ಆಕ್ಷೇಪಿಸಿದ್ದಾರೆ. ಈಗ ಈ ವಿಚಾರ ಜಿಲ್ಲೆಯ ರಾಜಕೀಯ ಅಂಗಳದಲ್ಲಿ ರಂಗು ಪಡೆದಿದೆ. ಕಾಂಗ್ರೆಸ್, ಜೆಡಿಎಸ್ ಈ ವಿಚಾರವನ್ನು ರಾಜಕೀಯ ಅಸ್ತ್ರವಾಗಿಯೂ ಬಳಸಿಕೊಳ್ಳುವ ಸಾಧ್ಯತೆ ಇದೆ.

ಕಳೆದ ನವೆಂಬರ್‌ನಲ್ಲಿ ಹೂ ಬೆಳೆಗಾರರು ಮತ್ತು ಹೂ ವರ್ತಕರು ಪ್ರತಿಭಟನೆ ನಡೆಸಿದ್ದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಖುದ್ದು ಭೇಟಿ ನೀಡಿದ್ದರು. ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಹೀಗಿದ್ದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಹೈಕೋರ್ಟ್‌ಗೆ ರಿಟ್ ಹೋಗುವ ಮೂಲಕ ವಿವಾದ ಮತ್ತೊಂದು ಮಗ್ಗುಲು ಪಡೆದಿದೆ.

‘ತರಕಾರಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಂತೆ ನಮಗೆ ಏಕೆ ಎಪಿಎಂಸಿಯಲ್ಲಿ ವಹಿವಾಟು ನಡೆಸಲು ಬಿಡುತ್ತಿಲ್ಲ. ಏಕೆ ತಾರತಮ್ಯ ಮಾಡಲಾಗುತ್ತಿದೆ. ಎಪಿಎಂಸಿಯಲ್ಲಿ ನಮ್ಮದೂ ಮಳಿಗೆ ಇದೆ. ಸುಸಜ್ಜಿತವಾಗಿ ವ್ಯವಸ್ಥೆ ಮಾಡಿದರೆ ಎಪಿಎಂಸಿಯಲ್ಲಿಯೇ ವಹಿವಾಟು ನಡೆಸಲು ಅವಕಾಶ ನೀಡಬಹುದು’ ಎಂದು ಅರ್ಜಿದಾರರು ಆಗ್ರಹಿಸುವರು.

***

ಎಪಿಎಂಸಿಯಲ್ಲಿ ಸ್ವಂತ ಮಳಿಗೆ ಹೊಂದಿದ್ದೇವೆ. ನಾವೂ ಹೂ ಮಾರಾಟ ಮಾಡುತ್ತಿದ್ದೇವೆ. ತರಕಾರಿ ಬೆಳೆಗಾರರಿಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ನಮಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಚಂಬಳ್ಳಿಯ ಎಸ್.ಕ್ಯಾತಪ್ಪಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಹೂ ಮಾರಾಟ ಮಾಡುವ 75 ಮಂದಿ ಮಳಿಗೆಯನ್ನು ಎಪಿಎಂಸಿಯಲ್ಲಿ ಹೊಂದಿದ್ದಾರೆ. ನಾವು ಬಹಳ ವರ್ಷದಿಂದ ವ್ಯಾಪಾರ ನಡೆಸುತ್ತಿದ್ದೇವೆ. ಎಪಿಎಂಸಿಯಲ್ಲಿ ವಹಿವಾಟು ನಡೆಸದಂತೆ ನಮಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.

ಶೀಘ್ರ ನ್ಯಾಯಾಲಯಕ್ಕೆ ವಿವರಣೆ
ಸರ್ಕಾರಿ ವಕೀಲರಿಗೆ ಈ ಬಗ್ಗೆ ವಿವರಣೆ ನೀಡುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಸೋಮವಾರ (ಫೆ.7) ಅವರು ವಿವರಣೆ ನೀಡಬೇಕಾಗಿದೆ ಎಂದು ಅರ್ಜಿದಾರರ ಪರ ವಕೀಲ ಶಿವಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್ ಇದೆ ಎನ್ನುವ ಕಾರಣದಿಂದ ಹೂ ಮಾರುಕಟ್ಟೆಯನ್ನು ಎಪಿಎಂಸಿಯಿಂದ ಸ್ಥಳಾಂತರಿಸಲಾಯಿತು. ಹಂತ ಹಂತವಾಗಿ ಎಲ್ಲ ವಹಿವಾಟುಗಳಿಗೆ ಅವಕಾಶ ನೀಡಲಾಗಿದೆ. ಆದರೆ ಮತ್ತೆ ಎಪಿಎಂಸಿಯಲ್ಲಿ ಏಕೆ ಹೂ ಬೆಳೆಗಾರರು ಮತ್ತು ರೈತರಿಗೆ ಅವಕಾಶ ನೀಡುತ್ತಿಲ್ಲ. ಇದರಲ್ಲಿ ರಾಜಕೀಯವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.