ADVERTISEMENT

ಶಾಸಕರ ವಿರುದ್ಧ ವಾಕ್ಸಮರ

ಹಣದಿಂದ ರಾಜಕಾರಣ ಮಾಡಲ್ಲ: ಕೆ.ಎಚ್‌. ಪುಟ್ಟಸ್ವಾಮಿ ಗೌಡ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 1:25 IST
Last Updated 10 ಜನವರಿ 2021, 1:25 IST
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ.ಎಚ್.ಪಿ ಬಣದ ಮುಖಂಡರು
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ.ಎಚ್.ಪಿ ಬಣದ ಮುಖಂಡರು   

ಗೌರಿಬಿದನೂರು: ‘ಕೇವಲ ಹಣದಿಂದ ರಾಜಕಾರಣ ಮಾಡದೆ ಜನತೆಯ ಕಷ್ಟಗಳಿಗೆ ಸ್ಪಂದಿಸಿ ಅವರ ಬದುಕಿಗೆ ಆಸರೆಯಾಗಿ ನಿಲ್ಲುವ ಮೂಲಕ ಆಶೀರ್ವಾದ ಪಡೆದು ರಾಜಕಾರಣ ಮಾಡಲು‌ ಬದ್ಧರಾಗಿದ್ದೇವೆ’ ಎಂದು ಕೆ.ಎಚ್.ಪಿ ಪೌಂಡೇಷನ್ ಅಧ್ಯಕ್ಷ ಕೆ.ಎಚ್. ಪುಟ್ಟಸ್ವಾಮಿಗೌಡ ತಿಳಿಸಿದರು.

ತಾಲ್ಲೂಕಿನ ಅಲಕಾಪುರದ ಬಳಿ ಕೆ.ಎಚ್.ಪಿ ಪೌಂಡೇಷನ್‌ನಿಂದ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ನಮ್ಮ ಬಣದ ಅಭ್ಯರ್ಥಿಗಳು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ‌ಮಾಡಿಕೊಂಡಿಲ್ಲ. ಏಕಾಂಗಿಯಾಗಿ ಹೋರಾಟ ಮಾಡಿ ಎಲ್ಲ ಪಕ್ಷದವರ ಸವಾಲನ್ನು ಎದುರಿಸಿ 175 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಶಾಸಕರು ನಮ್ಮ ಬಣದ ಕಾರ್ಯಕರ್ತರನ್ನು ವಿನಾಕಾರಣ ಟೀಕೆ ಮಾಡುವುದು ಸಭ್ಯತೆಯಲ್ಲ ಎಂದರು.

ADVERTISEMENT

ತಾಲ್ಲೂಕಿನಲ್ಲಿ ಮೂರು ದಶಕಗಳಿಂದ ರಾಜಕಾರಣ ಮಾಡಿರುವ ತಾವುಗಳು ಚುನಾವಣೆಯಲ್ಲಿ ಜನರಿಗೆ ಹಣ ಹಂಚದೆ ಚಿಂತಾಮಣಿ ಕಡಲೆಬೀಜವನ್ನು ಹಂಚಿದ್ದೀರಾ? ಕೇವಲ ನೀತಿಪಾಠ ಹೇಳುವ ಮೊದಲು ನ್ಯಾಯ ಮತ್ತು ನೀತಿ ಬಗ್ಗೆ ಅರಿಯಬೇಕಿದೆ. ಕ್ಷೇತ್ರದಲ್ಲಿ ಸದಾ ಸಮಾಜಮುಖಿ ‌ಕಾರ್ಯ ಮಾಡುವ ಮೂಲಕ ಜನರ ವಿಶ್ವಾಸ ‌ಮತ್ತು ಆಶೀರ್ವಾದ ಪಡೆಯಲು ಬದ್ಧವಾಗಿದ್ದೇವೆ ಎಂದು ಹೇಳಿದರು.

ಜಿ.ಪಂ ಸದಸ್ಯ ಎಚ್.ವಿ. ಮಂಜುನಾಥ್ ಮಾತನಾಡಿ, ರಾಜಕಾರಣದಲ್ಲಿ ಕೀಳು‌ಮಟ್ಟದ ವರ್ತನೆ ಮತ್ತು ಮಾತುಗಳು ಶೋಭೆ ತರುವಂತದ್ದಲ್ಲ. ಶಾಸಕರು ತಮ್ಮ ಕ್ಷೇತ್ರದಲ್ಲೇ ಹಿಡಿತ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಕೇವಲ ಇಬ್ಬರನ್ನು ತನ್ನೊಂದಿಗೆ ಇಟ್ಟುಕೊಂಡು ರಾಜಕಾರಣ ಮಾಡುವ ನೈತಿಕತೆ ನಮಗಿಲ್ಲ ಎಂದು ಟೀಕಿಸಿದರು.

ಕೋಚಿಮುಲ್ ನಿರ್ದೇಶಕ ಜೆ. ಕಾಂತರಾಜು ಮಾತನಾಡಿ, ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ಗೌಡರ ಬಣದಿಂದ 478 ಅಭ್ಯರ್ಥಿಗಳು ಕಣದಲ್ಲಿದ್ದರು. 175 ಮಂದಿ ಜಯಗಳಿಸಿದ್ದು, ಉಳಿದವರು ಕನಿಷ್ಠ ಮತಗಳ ಅಂತರದಲ್ಲಿ ಸೋತಿದ್ದಾರೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎಂ. ನರಸಿಂಹಮೂರ್ತಿ ಮಾತನಾಡಿ, ದಶಕಗಳಿಂದ ತಾಲ್ಲೂಕಿನಲ್ಲಿ ರಾಜಕೀಯ ಮಾಡಿಕೊಂಡು‌ ಬಂದಿರುವ ಶಾಸಕರು ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ಕೇವಲ 2ರಲ್ಲಿ ಮಾತ್ರ ಸ್ಪಷ್ಟ ಬಹುಮತ ಹೊಂದಿದ್ದಾರೆ. ಗೌಡರ ಬಣದಿಂದ 9 ಪಂಚಾಯಿತಿಗಳು ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಹೇಳಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಪಿ.ವಿ. ರಾಘವೇಂದ್ರ ‌ಹನುಮಾನ್ ಮಾತನಾಡಿ, ಪ್ರಸ್ತುತ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಅತೃಪ್ತ ಕಾರ್ಯಕರ್ತರಿದ್ದು ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಗೌಡರ ‌ಬಣಕ್ಕೆ ಸೇರ್ಪಡೆಯಾಗುವ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ಜಿ.ಕೆ. ಸತೀಶ್, ಕೆ.ಎಸ್. ಅನಂತರಾಜು, ಮಲ್ಲಸಂದ್ರ ಗಂಗಾಧರ್, ಬಸಪ್ಪರೆಡ್ಡಿ, ವೇಣುಗೋಪಾಲರೆಡ್ಡಿ, ಕಾಂತರಾಜು ಮಾತನಾಡಿದರು. ಮುಖಂಡರಾದ ವೆಂಕಟರಾಮರೆಡ್ಡಿ, ಅಬ್ದುಲ್ಲಾ, ಮಲ್ಲಸಂದ್ರ ಗಂಗಾಧರ್, ಆರ್.ಪಿ. ಗೋಪಾಲಗೌಡ, ಶ್ರೀನಿವಾಸಗೌಡ, ಬಸಪ್ಪರೆಡ್ಡಿ, ಶ್ರೀನಾಥ್, ಫರೀದ್, ಪದ್ಮಾವತಮ್ಮ, ಕೆ.ಆರ್. ಸಪ್ತಗಿರಿ, ರೂಪಾ, ಲಕ್ಷ್ಮಿನಾರಾಯಣಪ್ಪ, ಅಲ್ತಾಪ್, ವರಲಕ್ಷ್ಮಿ, ಸವಿತಾ, ಪ್ರಮೀಳಮ್ಮ, ಲಕ್ಷ್ಮಿ, ರೇಣುಕಮ್ಮ, ಕೃಷ್ಣಾರೆಡ್ಡಿ, ಪಿ.ಎನ್. ಶಿವಶಂಕರರೆಡ್ಡಿ, ಮುನಿಯಪ್ಪ, ಬಾಬುರೆಡ್ಡಿ, ಕಿಮ್ಲಾನಾಯಕ್, ಏಜಾಜ್, ನಾರಾಯಣಸ್ವಾಮಿ, ಅಬುಬೇಕರ್, ರಾಜಕುಮಾರ್, ಗೋಪಾಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.