ಚೇಳೂರು: ತಾಲ್ಲೂಕಿನ ಪುಲಗಲ್ ಗ್ರಾಮದಲ್ಲಿ ಬುಧವಾರ ಜನಸ್ಪಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಬಂದ ಶಾಸಕರು ಹಾಗೂ ಅಧಿಕಾರಿಗಳಿಗೆ ಗ್ರಾಮಸ್ಥರು ಪೂರ್ಣಕುಂಭ ಸ್ವಾಗತ ನೀಡಿದರು.
ಸಭೆಯಲ್ಲಿ ಪೋಡಿ, ಭೂಮಿ ಮಂಜೂರು, ನಿವೇಶನ, ಪಿಂಚಣಿ, ಪಡಿತರ ಚೀಟಿ ಸೇರಿದಂತೆ ವಿವಿಧ ಸೇವೆಗಳಿಗಾಗಿ ಸಂಬಂಧಿಸಿದಂತೆ 70ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕಯಾದವು.
ಪುಲಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 150 ಮಂದಿ ವಿಧವಾ, ವೃದ್ದಾಪ್ಯ ಸೇರಿದಂತೆ ವಿವಿಧ ಪಿಂಚಣಿ, 17 ಮಂದಿಗೆ ಪೌತಿ ಖಾತೆ, 20 ದುರಸ್ತಿ ಪೋಡಿ ಪ್ರಕರಣ, 20 ಮೀನುಗಾರಿಕೆ ಬಲೆಗಳು, 2 ಈರುಳ್ಳಿ ಶೇಖರಣಾ ಘಟಕ, ಖಾತೆ ಬದಲಾವಣೆ ಸೌಲಭ್ಯವನ್ನೂ ನೀಡಲಾಯಿತು. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 6 ಪಂಪ್ ಸೆಟ್ ಹಾಗೂ ವಿವಿಧ ಕಲ್ಯಾಣ ಯೋಜನೆಗಳ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 26 ಗರ್ಭಿಣಿಯರಿಗೆ ಸೀಮಂತ ಹಾಗೂ 20 ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ವಿರುದ್ಧದ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು
ನರೇಗಾ ಯೋಜನೆಗಳ ಬಗ್ಗೆ ಭಿತ್ತಿಪತ್ರ ಪ್ರದರ್ಶನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣ ಅಭಿಯಾನ ಪೌಷ್ಟಿಕ ಆಹಾರದ ತರಕಾರಿ, ಹಣ್ಣುಗಳು, ಕಾಳುಗಳು, ರೊಟ್ಟಿಗಳು, ರವೆಉಂಡೆ, ಸೊಪ್ಪು, ಮೊಟ್ಟೆ, ಮುದ್ದೆ ಸೇರಿದಂತೆ ಪೌಷ್ಟಿಕ ಪದಾರ್ಥಗಳ ಪ್ರದರ್ಶನ ಗಮನ ಸೆಳೆಯಿತು. ಪುಲಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಶಾಸಕ ಸುಬ್ಬಾರೆಡ್ಡಿ ಮಾತನಾಡಿ, ಬಡಜನರನ್ನು ಕಚೇರಿಗಳತ್ತ ಅಲೆದಾಡಿಸುವುದನ್ನು ತಪ್ಪಿಸುವ ಸಲುವಾಗಿ ಹಾಗೂ ತ್ವರಿತವಾಗಿ ಕೆಲಸ ಕಾರ್ಯಗಳು ನಡೆಯಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಸರ್ವೆ ಹಾಗೂ ವೃದ್ದಾಪ್ಯ ಮಾಸಿಕ ವೇತನ ಮಂಜೂರಾತಿ ಪತ್ರಗಳು ವಿತರಿಸಲಾಗಿದೆ. ಪ್ರತಿಯೊಬ್ಬರೂ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು. ಗಂಟ್ಲಮಲ್ಲಮ್ಮ ಕಣಿವೆಯನ್ನು ₹ 200ಕೋಟಿ ವೆಚ್ಚದ ಹಣದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ತಹಶೀಲ್ದಾರ್ ಶ್ವೇತಾ ಬಿ.ಕೆ. ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ವೃದ್ದಾಪ್ಯ ವೇತನ ನೀಡಲಾಗಿದೆ. ವಿವಿಧ ಇಲಾಖೆಯ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ಇಒ ರಮೇಶ್, ಪಿಡಿಒ ಶೋಭನ ರೆಡ್ಡಿ, ಗ್ರಾ.ಪಂ ಅಧ್ಯಕ್ಷ ಎಂ.ಟಿ. ವೆಂಕಟರವಣಪ್ಪ, ಸಿಪಿಐ ಜನಾರ್ದನ್, ಬಿಇಒ ವೆಂಕಟೇಶಪ್ಪ, ತೋಟಗಾರಿಕೆ ಇಲಾಖೆಯ ಲಲಿತ, ಸಿಡಿಪಿಒ ರಾಮಚಂದ, ಎಡಿಎಲ್ಆರ್ ಮಂಜುನಾಥ ಬಾಬು, ಆಹಾರ ನಿರೀಕ್ಷಕಿ ಪುಷ್ಪಾ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಮಹೇಶ್, ಕೃಷಿ ಇಲಾಖೆ ಶ್ರೀನಿವಾಸ್, ಶಿವಪ್ಪ, ಪಿ.ವಿ. ರಾಮಾಂಜನೇಯ ರೆಡ್ಡಿ, ಭಾಸ್ಕರ್ ರೆಡ್ಡಿ, ಭಾನು ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.