ಚಿಕ್ಕಬಳ್ಳಾಪುರ: ಒಂದೆಡೆ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿನ ಬೇರೆ ಪಕ್ಷಗಳ ನಾಯಕರಿಗೆ ಗಾಳ ಹಾಕುತ್ತಲೇ ಇದ್ದಾರೆ. ಅವರ ಆಪರೇಷನ್ ಕಾರ್ಯಾಚರಣೆಯ ದೃಷ್ಟಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ.
ಈ ನಡುವೆಯೇ ಕಾಂಗ್ರೆಸ್ ಮುಖಂಡರೂ ಆದ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರನ್ನು ರಾಜ್ಯ ಸರ್ಕಾರ ಡಾ ಎಚ್.ನರಸಿಂಹಯ್ಯ ಅಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಮೂಲಕ ಗೌರಿಬಿದನೂರು ರಾಜಕೀಯ ಮತ್ತೊಂದು ಸುತ್ತಿನಲ್ಲಿ ರಂಗೇರಿದೆ.
ಈ ಇಬ್ಬರು ನಾಯಕರ ದೃಷ್ಟಿ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಮೇಲಿದೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ರಾಜಕೀಯವನ್ನು ಗಮನಿಸಿದರೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ರಾಜಕಾರಣ ಆಗಾಗ್ಗೆ ತೀವ್ರವಾಗಿ ಕಾವೇರುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಹಿರಿಯ ನಾಯಕ ಶಿವಶಂಕರ ರೆಡ್ಡಿ ‘ಮಾಜಿ’ ಆಗಿದ್ದಾರೆ. ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಕಾಂಗ್ರೆಸ್ ಬೆಂಬಲಿಸಿದ್ದಾರೆ.
ಮಾಜಿ ಸಚಿವರೂ ಆದ ಶಿವಶಂಕರ ರೆಡ್ಡಿ ರಾಜ್ಯ ಮಟ್ಟದಲ್ಲಿನ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನೇ ಪಡೆಯಬಹುದಿತ್ತು. ಆದರೆ ಅವರು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಚಟುವಟಿಕೆ ಹೊಂದಿರುವ ಎಚ್.ಎನ್.ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ‘ಮಾಜಿ’ಯಾದರೂ ಕ್ಷೇತ್ರದ ಮೇಲೆ ಹಿಡಿತ ಸಡಿಲಿಸಬಾರದು ಎನ್ನುವ ಇರಾದೆ ಅವರದ್ದು.
ಶಿವಶಂಕರ ರೆಡ್ಡಿ ಅವರಿಗೆ ಅಧ್ಯಕ್ಷ ಸ್ಥಾನ ದೊರೆತಿರುವುದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಅವರ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಮತ್ತೆ ತಮ್ಮ ನಾಯಕನಿಗೆ ರಾಜಕೀಯವಾಗಿ ಹಿಡಿದ ದೊರೆತಿದೆ ಎಂದೇ ಖುಷಿಯಲ್ಲಿ ಇದ್ದಾರೆ.
2023ರ ವಿಧಾನಸಭಾ ಚುನಾವಣೆ ಪೂರ್ವದಿಂದಲೂ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ನಾಯಕರು, ಕಾರ್ಯಕರ್ತರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಹೀಗೆ ಎಲ್ಲ ಪಕ್ಷಗಳ ನಾಯಕರು, ಕಾರ್ಯಕರ್ತರು ಗೌಡರ ಗೆಲುವಿಗೆ ಕಾರಣ.
ಚುನಾವಣೆಯ ಗೆಲುವಿನ ತರುವಾಯವೂ ಪುಟ್ಟಸ್ವಾಮಿಗೌಡ ಅವರ ಆಪರೇಷನ್ ಕಾರ್ಯಾಚರಣೆ ನಿಂತಿಲ್ಲ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಹಿಡಿದು ಕ್ಷೇತ್ರದಲ್ಲಿನ ಎಲ್ಲ ಹಂತದಲ್ಲಿನ ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪುಟ್ಟಸ್ವಾಮಿಗೌಡ ಅವರು ಮತ್ತೆ ಮುಖಂಡರನ್ನು ಸೆಳೆಯುತ್ತಿದ್ದಾರೆ.
ಕಾಂಗ್ರೆಸ್ ಬೆಂಬಲಿಸಿರುವ ಕೆ.ಎಚ್.ಪುಟ್ಟಸ್ವಾಮಿ ಗೌಡ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಬಣದಿಂದಲೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ಚದುರುತ್ತಿರುವ ಪಕ್ಷದ ಮುಖಂಡರನ್ನು ಕಾರ್ಯಕರ್ತರನ್ನು ಒಗ್ಗೂಡಿಸುವ ಜವಾಬ್ದಾರಿ ಶಿವಶಂಕರ ರೆಡ್ಡಿ ಅವರ ಮೇಲಿದೆ.
ಹೀಗೆ ಶಿವಶಂಕರ ರೆಡ್ಡಿ ಅವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿರುವುದು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಚರ್ಚೆಗೂ ಕಾರಣವಾಗಿದೆ.
ನಾಮನಿರ್ದೇಶನದ್ದೂ ಹಗ್ಗಜಗ್ಗಾಟ: ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಮತ್ತು ಮಾಜಿ ಶಾಸಕರ ನಡುವಿನ ಹಗ್ಗಜಗ್ಗಾಟದಿಂದ ಇಂದಿಗೂ ನಾಮನಿರ್ದೇಶನದ ಆಯ್ಕೆಗಳು ಅಂತಿಮವಾಗಿಲ್ಲ. ಈ ಕಾರಣದಿಂದ ತಮ್ಮ ಬೆಂಬಲಿಗರಿಗೆ ನಾಮನಿರ್ದೇಶನದ ಹುದ್ದೆಗಳನ್ನು ಕೊಡಿಸಲು ಈ ಇಬ್ಬರು ನಾಯಕರಿಗೂ ಸಾಧ್ಯವಾಗಿಲ್ಲ.
ಮುಂದುವರಿದ ಗೌಡರ ಆಪರೇಷನ್ ಜಿ.ಪಂ, ತಾ.ಪಂ ಚುನಾವಣೆಯೇ ದೃಷ್ಟಿ ಸಾಧ್ಯವಾಗದ ನಾಮನಿರ್ದೇಶನ ಹುದ್ದೆಗೆ ನೇಮಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.