ADVERTISEMENT

ಚಿಕ್ಕಬಳ್ಳಾಪುರ | ನಿಷ್ಠುರವಾದಿ ಬರಹಗಾರ್ತಿ ಗೀತಾ ನಾಗಭೂಷಣ್‌

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 10:58 IST
Last Updated 30 ಜೂನ್ 2020, 10:58 IST
ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳು ಕಾದಂಬರಿಕಾರ್ತಿ ಗೀತಾ ನಾಗಭೂಷಣ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳು ಕಾದಂಬರಿಕಾರ್ತಿ ಗೀತಾ ನಾಗಭೂಷಣ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ‘ಸಾಮಾನ್ಯ ಮಹಿಳೆಯಾಗಿ ಅಸಾಮಾನ್ಯ ಸಾಧನೆ ಮಾಡಿದ ದಿಟ್ಟ, ನಿಷ್ಠುರವಾದಿ ವೈಚಾರಿಕ ಲೇಖಕಿ, ಕನ್ನಡದ ಕಾದಂಬರಿಕಾರ್ತಿ ಗೀತಾ ನಾಗಭೂಷಣ್‌ ಅವರ ಅಗಲಿಕೆಯಿಂದ ಸಾಹಿತ್ಯ ಲೋಕಕ್ಕೆ ನಷ್ಟವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಹೇಳಿದರು.

ನಗರದಲ್ಲಿ ಮಂಗಳವಾರ ಕಸಾಪ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಗೀತಾ ನಾಗಭೂಷಣ್‌ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಭಾಷೆಯ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸಾಹಿತ್ಯ ಕೃಷಿಯಿಂದ ಅನುಪಮ ಸೇವೆ ಸಲ್ಲಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಪ್ರಪಥಮ ಮಹಿಳಾ ಸಾಹಿತಿ ಗೀತಾ ನಾಗಭೂಷಣ್‌ ಅವರ ಗದುಗಿನಲ್ಲಿ ನಡೆದ 76ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು’ ಎಂದು ತಿಳಿಸಿದರು.

ADVERTISEMENT

‘ತಮ್ಮ ಸಾಹಿತ್ಯ ಕೃಷಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಗೀತಾ ಅವರನ್ನು ಅರಸಿ ಬಂದಿವೆ’ ಎಂದರು.

ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಮಾತನಾಡಿ, ‘ಗೀತಾ ನಾಗಭೂಷಣ್ ಅವರು ರಚಿಸಿದ ಕೃತಿಗಳನ್ನು ಯುವ ತಲೆಮಾರು ಅಧ್ಯಯನ ಮಾಡಬೇಕು. ಗೀತಾ ಅವರ ಬದುಕು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಲೇಖಕಿಯರಿಗೆ ಮಾದರಿಯಾಗಬೇಕು’ ಎಂದು ಹೇಳಿದರು.

ಸಾಹಿತಿ ಟಿ.ಎಸ್.ನಾಗೇಂದ್ರ ಬಾಬು ಮಾತನಾಡಿ, ‘ಮಹಿಳೆಯರು ಸಾಂಸಾರಿಕ ಜಂಜಾಟ ಮತ್ತು ಅವರದೇ ಆದ ಕೌಟುಂಬಿಕ ಜವಾಬ್ದಾರಿಗಳ ನಿರ್ವಹಣೆ ನಡುವೆಯು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಅತ್ಯಂತ ಶ್ಲಾಘನೀಯ. ಈ ನಿಟ್ಟಿನಲ್ಲಿ ಗೀತಾ ನಾಗಭೂಷಣ್ ಅವರ ಸೇವೆ ಅನನ್ಯವಾದದ್ದು’ ಎಂದು ತಿಳಿಸಿದರು.

ಕಸಾಪ ಜಿಲ್ಲಾ ಘಟಕದ ಕೋಶಾಧ್ಯಕ್ಷ ಎಂ.ನಂಜುಂಡಪ್ಪ, ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷೆ ಉಷಾ ಶ್ರಿನಿವಾಸ್, ಗೌರವ ಕಾರ್ಯದರ್ಶಿ ವಿನೋದ್ ಕುಮಾರ್, ಚಿಂತಾಮಣಿ ತಾಲ್ಲೂಕು ಘಟಕದ ಅಧ್ಯಕ್ಷ ಮು.ಪಾಪಣ್ಣ, ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.