ADVERTISEMENT

‘ಮಹನೀಯರು ಜಾತಿಗೆ ಸೀಮಿತರಲ್ಲ’

ಬಾಗೇಪಲ್ಲಿಯಲ್ಲಿ ಕನಕ, ಒನಕೆ ಓಬವ್ವ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 4:49 IST
Last Updated 12 ನವೆಂಬರ್ 2022, 4:49 IST
ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ, ಒನಕೆ ಓಬವ್ವ ಜಯಂತಿಗಳ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿದರು. ತಹಶೀಲ್ದಾರ್ ವೈ.ರವಿ, ಇಓ ಎಸ್.ಆನಂದ್, ಪುರಸಭಾ ಮುಖ್ಯಾಧಿಕಾರಿ ಕೆ.ಮಧುಕರ್ ಇದ್ದರು.
ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ, ಒನಕೆ ಓಬವ್ವ ಜಯಂತಿಗಳ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿದರು. ತಹಶೀಲ್ದಾರ್ ವೈ.ರವಿ, ಇಓ ಎಸ್.ಆನಂದ್, ಪುರಸಭಾ ಮುಖ್ಯಾಧಿಕಾರಿ ಕೆ.ಮಧುಕರ್ ಇದ್ದರು.   

ಬಾಗೇಪಲ್ಲಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನಕದಾಸರ ಹಾಗೂ ಒನಕೆ ಓಬವ್ವ ಅವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ,‘ಜಾತಿಗಳ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿರುವ ಮಹನೀಯರ ಜನ್ಮದಿನಾಚರಣೆಗಳ ಹೆಸರಿನಲ್ಲಿ ಆಯಾಯ ಜಾತಿಯವರು ಮಾತ್ರ ಮಹನೀಯರ ಆಚರಣೆಯಲ್ಲಿ ಭಾಗಿಯಾಗಿರುವುದು ಜಾತೀಯತೆಗೆ ಮತ್ತಷ್ಟು ಪುಷ್ಟಿ ನೀಡುತ್ತದೆ’ ಎಂದರು.

ಬುದ್ಧ, ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಮಾನವತಾವಾದಿ ಕುವೆಂಪು, ದಾಸರು, ಶರಣರು ಸೇರಿದಂತೆ ಅನೇಕ ಮಹನೀಯರು ಜಾತಿ ವ್ಯವಸ್ಥೆ ಹೋಗಲಾಡಿಸಲು ಹೋರಾಡಿದ್ದಾರೆ. ಅವರ ಹೋರಾಟದ ಶ್ರಮ, ಜೀವನ ನಡೆ ಹಾಗೂ ನುಡಿಗಳ ಬಗ್ಗೆ ಇಂದಿನ ಪೀಳಿಗೆಗೆ ತಿಳಿಯಬೇಕು. ಅವರ ನಡೆ, ನುಡಿ, ಆದರ್ಶಗಳನ್ನು ಪಾಲಿಸಬೇಕು ಎಂದರು.

ADVERTISEMENT

ರಾಜಕೀಯ ವ್ಯವಸ್ಥೆಯಲ್ಲಿಮಹನೀಯರ ದಿನಾಚರಣೆಗಳು ರಾಜಕೀಯಗಳಿಗೆ ಬಳಕೆ ಆಗುತ್ತಿದೆ. ಮಹನೀಯರನ್ನು ಜಾತಿಗಳಿಗೆ ಸೀಮಿತ ಮಾಡುವುದು ಬೇಡ. ಎಲ್ಲಾ ಸಮುದಾಯವರು ಸೇರಿ ಮಹನೀಯರ ಜಯಂತಿಗಳನ್ನು ಆಚರಣೆ ಮಾಡಬೇಕು ಎಂದರು.

ವೀರವನಿತೆ ಒನಕೆ ಓಬವ್ವರಂತಹ ಕೆಚ್ಚೆದೆಯ ಮಹಿಳೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಮಹಿಳೆಯರು ಧೈರ್ಯದಿಂದ ಇರಬೇಕು. ಮಹನೀಯರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಶಿಕ್ಷಕ ವೆಂಕಟೇಶ್ವರ ಅವರು ಕನಕದಾಸರ, ಒನಕೆ ಓಬವ್ವಅವರ ಬಗ್ಗೆ ಗುಣಗಾನ ಮಾಡಿದರು.

ತಹಶೀಲ್ದಾರ್ ವೈ.ರವಿ, ತಹಶೀಲ್ದಾರ್ ಗ್ರೇಡ್-2 ವಿ.ಸುಬ್ರಮಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದ್ದಪ್ಪ, ಪುರಸಭಾ ಮುಖ್ಯಾಧಿಕಾರಿ ಕೆ. ಮಧುಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಎ. ನಂಜುಂಡಪ್ಪ, ಸದಸ್ಯ ಕೆ.ಎ. ಶ್ರೀನಾಥ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್. ಹನುಮಂತರೆಡ್ಡಿ, ಕುರುಬರ ಸಂಘದ ರಾಜ್ಯ ನಿರ್ದೇಶಕಿ ವೈ. ಪ್ರೇಮಾಚಂದ್ರಪ್ಪ, ತಾಲ್ಲೂಕು ಕುರುಬರ ಸಂಘದ ಮುನಿಸಾಮಿ, ಚಂದ್ರಪ್ಪ,ಆದಿನಾರಾಯಣಪ್ಪ, ಶ್ರೀನಿವಾಸಗೌಡ, ಕಾರಕೂರಪ್ಪ, ವೆಂಕಟರವಣಪ್ಪ, ಗಂಗಾಧರ, ಛಲವಾದಿ ಸಂಘದ ತಾಲ್ಲೂಕುಅಧ್ಯಕ್ಷ ಟಿ. ರಾಮಪ್ಪ, ರಮೇಶ್, ಶಿವಪ್ಪ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.