ಗೌರಿಬಿದನೂರು: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರ ಇಡದೆ, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಪ್ರಾಂಶುಪಾಲ ಮಂಜುನಾಥ್ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಕಾಲೇಜು ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಪ್ರಾಂಶುಪಾಲ ಮಂಜುನಾಥ್ ಅವರನ್ನು ಕಾಲೇಜಿನಿಂದ ವಜಾ ಮಾಡಬೇಕು ಎಂದು ಅವರ ವಿರುದ್ಧ ಘೋಷಣೆ ಕೂಗಿದರು.
ದಲಿತ ಮುಖಂಡ ಇಡಗೂರು ಪ್ರಸನ್ನ ಕುಮಾರ್ ಮಾತನಾಡಿ, ಅಂಬೇಡ್ಕರ್ ಸಂವಿಧಾನದ ಶಿಲ್ಪಿ ಮಾತ್ರವಲ್ಲದೆ, ಸಮಾಜ ಪರಿವರ್ತನೆಯ ದಿಕ್ಕು ತೋರಿಸಿದ ಮಹನೀಯ. ಇಂತಹ ಮಹಾನ್ ನಾಯಕರಿಗೆ ಗೌರವ ನೀಡದೆ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿರುವುದು ಅವರಿಗೆ ಮಾಡಿದ ಅಪಮಾನ. ದಲಿತರ ಬಗ್ಗೆ ಅವರಿಗೆ ಇರುವ ತಾತ್ಸಾರ ಮನೋಭಾವ ತೋರಿಸುತ್ತದೆ. ತಕ್ಷಣವೇ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲ ಕ್ಷಮೆಯಾಚನೆ ಮಾಡಿ, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಭರವಸೆ ನೀಡಬೇಕೆಂದು ಒತ್ತಾಯಿಸಿದರು.
ಪ್ರಾಂಶುಪಾಲ ಮಂಜುನಾಥ್, ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದೆ ಇರುವುದು ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಮಾದ ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದರು.
ಮುನಿಯಪ್ಪ, ಸತ್ಯನಾರಾಯಣ್, ಕಾದಲವೇಣಿ ಅಂಬರೀಶ್, ಪೃಥ್ವಿ, ನಂದೀಶ್ ಶಿವು ಸಂತೋಷ್, ಬಾಲಯ್ಯ, ಮಂಜುನಾಥ್, ಬೊಮ್ಮಸಂದ್ರ ವೆಂಕಟೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.