ADVERTISEMENT

ಗೌರಿಬಿದನೂರು ನಗರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ; ಚಿಂತಾಮಣಿ ಅತಂತ್ರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 2:48 IST
Last Updated 15 ನವೆಂಬರ್ 2019, 2:48 IST
   

ಗೌರಿಬಿದನೂರು: ನಗರಸಭೆ ಚುನಾವಣೆಯ ಫಲಿತಾಂಶವು ಗುರುವಾರ ಪ್ರಕಟಗೊಂಡಿದ್ದು, ಒಟ್ಟು 31 ವಾರ್ಡುಗಳಲ್ಲಿ ಕಾಂಗ್ರೆಸ್- 15, ಜೆಡಿಎಸ್- 7, ಬಿಜೆಪಿ- 3 ಹಾಗೂ ಪಕ್ಷೇತರ ಅಭ್ಯರ್ಥಿ 6 ಮಂದಿ ವಿಜೇತರಾಗಿದ್ದಾರೆ.

ಬೆಳಿಗ್ಗೆ 8 ಗಂಟೆಗೆ ನಗರದ ಎಸ್ ಎಸ್ ಇ ಎ ಸರ್ಕಾರಿ ಕಾಲೇಜಿನಲ್ಲಿ‌ ನಡೆದ ಚುನಾವಣಾ ಫಲಿತಾಂಶ ಪ್ರಕ್ರಿಯೆಯು ಶಾಂತಿಯುತವಾಗಿ ನಡೆದಿದೆ. ವಾರ್ಡ್ 22 ಮಾದನಹಳ್ಳಿಯಲ್ಲಿ ಕೇವಲ ಒಂದು ಅಂಚೆ ಮತದ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಬಿ.ಗಿರೀಶ್ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳು ಕೇವಲ 2 ಮತಗಳ ಅಂತರದಲ್ಲಿ‌ ಗೆಲುವಿನ ನಗೆ ಬೀರಿದ್ದಾರೆ.

ಒಟ್ಟಾರೆ ಚುನಾವಣೆಯಲ್ಲಿ ಮೊದಲನೇ ವಾರ್ಡಿನ ಎಸ್.ರಾಜೇಶ್ವರಿ 834 ಮತಗಳ ಅಂತರದಲ್ಲಿ‌ ಅತ್ಯಧಿಕ ಮತಗಳನ್ನು ‌ಪಡೆದು ಜಯ ಸಾಧಿಸಿದರೆ, ಎರಡನೇ ಸ್ಥಾನದಲ್ಲಿ 6 ನೇ ವಾರ್ಡಿನ ಡಿ.ಎನ್.ವೆಂಕಟರೆಡ್ಡಿ 647 ಹಾಗೂ ಮೂರನೇ ಸ್ಥಾನದಲ್ಲಿ 13 ನೇ ವಾರ್ಡಿನ ಸ್ವತಂತ್ರ ಅಭ್ಯರ್ಥಿ ಕೆ.ಆರ್.ಸಪ್ತಗಿರಿ 582 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ADVERTISEMENT

12ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಅಮರನಾಥ್ 302 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ಫಲಿತಾಂಶ ಪ್ರಕಟಗೊಂಡ ನಂತರ ಕೇವಲ ಒಂದು ಮತದ ಅಂತರದಲ್ಲಿ ಜಯಗಳಿಸಿದ್ದ 22 ನೇ ವಾರ್ಡಿನ ಮಾದನಹಳ್ಳಿಯ‌ ಜಿ.ಬಿ.ಗಿರೀಶ್ ಫಲಿತಾಂಶವನ್ನು ಒಪ್ಪದ ಪ್ರತಿಸ್ಪರ್ಧಿ ಎಚ್.ಗೋವಿಂದ ಬೆಂಬಲಿಗರು ಹಾಗೂ 19 ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ನಟರಾಜ್ ಬೆಂಬಲಿಗರು ಫಲಿತಾಂಶದಲ್ಲಿ ದೋಷವಿದ್ದು, ಮರು ಎಣಿಕೆ ಮಾಡುವಂತೆ ಚುನಾವಣಾ ಅಧಿಕಾರಿಗಳನ್ನು ಒತ್ತಾಯಿಸಿದರು.

ಮೊದಲನೇ ವಾರ್ಡಿನ ಎಸ್.ರಾಜೇಶ್ವರಿ 834 ಅತ್ಯಧಿಕ ಮತಗಳ ಅಂತರದಲ್ಲಿ‌ ಜಯಸಾಧಿಸಿದರೆ, ಎರಡನೇ ಸ್ಥಾನದಲ್ಲಿ 6 ನೇ ವಾರ್ಡಿನ ಡಿ.ಎನ್.ವೆಂಕಟರೆಡ್ಡಿ 647 ಹಾಗೂ ಮೂರನೇ ಸ್ಥಾನದಲ್ಲಿ 13 ನೇ ವಾರ್ಡಿನ ಕೆ.ಆರ್.ಸಪ್ತಗಿರಿ 582 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ಚಿಂತಾಮಣಿ ನಗರಸಭೆಯಲ್ಲಿ ಅತಂತ್ರ ಸ್ಥಿತಿ

ಚಿಂತಾಮಣಿ:ಇಲ್ಲಿನ ನಗರಸಭೆ ಚುನಾವಣೆಯಲ್ಲಿನ ಪ್ರಮುಖ ಎದುರಾಳಿಗಳಾದ ಜೆಡಿಎಸ್ ಮತ್ತು ಭಾರತೀಯ ಪ್ರಜಾ ಪಕ್ಷವು ಸಮಬಲ ಸಾಧಿಸಿದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷೇತರರ ನೆರವು ಯಾಚಿಸುವ ಪರಿಸ್ಥಿತಿ ಎದುರಾಗಿದೆ.

ಚುನಾವಣೆಯಲ್ಲಿ ಜೆಡಿಎಸ್ ಮತ್ತು ಎಂ.ಸಿ.ಸುಧಾಕರ್ ಬೆಂಬಲದ ಭಾರತೀಯ ಪ್ರಜಾಪಕ್ಷ ಎಲ್ಲ 31 ವಾರ್ಡ್‌ಗಳಲ್ಲಿ, ಬಿಜೆಪಿ 30, ಕಾಂಗ್ರೆಸ್ 16, ಬಿಎಸ್ಪಿ 3, ಜೆಡಿಯು 1 ಹಾಗೂ 14 ಮಂದಿ ಪಕ್ಷೇತರರು ಸೇರಿ ಒಟ್ಟು 126 ಮಂದಿ ಕಣದಲ್ಲಿದ್ದರು.

ಈ ಹಿಂದೆ ಅಧಿಕಾರದ ಗದ್ದುಗೆ ಮೇಲೆ ಕುಳಿತಿದ್ದ ಜೆಡಿಎಸ್-14, ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ನೇತೃತ್ವದ ಭಾರತೀಯ ಪ್ರಜಾ ಪಕ್ಷ-14, ಕಾಂಗ್ರೆಸ್-01, ಪಕ್ಷೇತರರು-02 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಕಳೆದ ಬಾರಿ 16 ಸ್ಥಾನ ಗಳಿಸಿದ್ದ ಜೆಡಿಎಸ್ ಈಗ 2 ಸ್ಥಾನ ಕಳೆದುಕೊಂಡು 14 ಸ್ಥಾನಗಳಿಗೆ ಇಳಿದಿದೆ. 13 ಸ್ಥಾನ ಗಳಿಸಿದ್ದ ಭಾರತೀಯ ಪ್ರಜಾ ಪಕ್ಷ 1 ಸ್ಥಾನವನ್ನು ಹೆಚ್ಚಿಗೆ ಗಳಿಸಿ ತನ್ನ ಬಲವನ್ನು ವೃದ್ಧಿಸಿಕೊಂಡಿದೆ. ಆದರೂ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ 1 ಸ್ಥಾನವನ್ನು ಉಳಿಸಿಕೊಂಡಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷವು ಇದ್ದ 1 ಸ್ಥಾನವನ್ನು ಕಳೆದುಕೊಂಡಿದೆ.

ವಾರ್ಡ್ 10ರಲ್ಲಿ ಜಯಗಳಿಸಿರುವ ಭಾರತೀಯ ಪ್ರಜಾ ಪಕ್ಷದ ಡಿ.ಎನ್.ಸುಹಾಸಿನಿ ಅತ್ಯಂತ ಹೆಚ್ಚಿನ ಮತಗಳ ಅಂತರ(760) ಹಾಗೂ 11ನೇ ವಾರ್ಡ್ ನಿಂದ ಆಯ್ಕೆಯಾಗಿರುವ ಪಕ್ಷೇತರ ಅಭ್ಯರ್ಥಿ ಜಿ.ಎ.ಅಕ್ಷಯಕುಮಾರ್ ಅತ್ಯಂತ ಕಡಿಮೆ ಮತಗಳ ಅಂತರ(15 ಮತಗಳು) ಗೆಲುವನ್ನು ಪಡೆದಿದ್ದಾರೆ.

ಎರಡು ಪ್ರಮುಖ ಪಕ್ಷಗಳು ಸಮಬಲ ಗಳಿಸಿರುವುದರಿಂದ ‘ಮ್ಯಾಜಿಕ್‌ ಸಂಖ್ಯೆ’ 16 ತಲುಪಲು ಪಕ್ಷೇತರರ ಮೊರೆ ಹೋಗಬೇಕಾಗಿದೆ. ಇದರ ಜತೆಗೆ ಶಾಸಕರು, ಸಂಸದರು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ತಿನ ಸದಸ್ಯರು ಮತದಾನದ ಹಕ್ಕನ್ನು ಹೊಂದಿರುತ್ತಾರೆ. ತಂತ್ರ, ಪ್ರತಿತಂತ್ರಗಳನ್ನು ಹೂಡಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.