ಗೌರಿಬಿದನೂರು: ಹೆರಿಗೆಗೆ ಬಂದಿದ್ದ ಭಾಗ್ಯಮ್ಮ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಮೃತ ಮಹಿಳೆ ಸಂಬಂಧಿಕರು ಬುಧವಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗದಲ್ಲಿ ಶವವಿಟ್ಟು ವೈದ್ಯರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಅಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ಹೆರಿಗೆಗೆ ಎಂದು ಬಂದಿದ್ದ ಪುಲಗಾನಹಳ್ಳಿ ಭಾಗ್ಯಮ್ಮ (30) ಚಿಕಿತ್ಸೆ ಪಡೆದು ಅಲ್ಲಿಂದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ರಕ್ತದ ಮಾದರಿ ಗೊಂದಲದಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಭಾಗ್ಯಮ್ಮ ಮೃತಪಟ್ಟಿದ್ದರು.
ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಪ್ರಭಾರ ಜಿಲ್ಲಾ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್ ಬಾಬು ಮಾತನಾಡಿ, ‘ಹೆರಿಗೆ ನೋವಿನಿಂದ ಬಂದ ಭಾಗ್ಯಮ್ಮ ಅವರನ್ನು ಇಲ್ಲಿನ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿ ಗಂಡು ಮಗುವಿಗೆ ಹೆರಿಗೆ ಮಾಡಿಸಿದ್ದಾರೆ. ರಕ್ತಸ್ರಾವ ಜಾಸ್ತಿಯಾದಾಗ ರಕ್ತ ನೀಡಲು ರಕ್ತದ ಮಾದರಿ ಪರೀಕ್ಷೆ ನಡೆಸಿದಾಗ ಬಿ-ಎಂದು ಗೊತ್ತಾಗಿದೆ. ಆದರೆ, ಅಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದವರು ಬಿ+ ಎಂದು ನೀಡಿದ್ದರು. ಆಗ ಬಿ-ರಕ್ತ ಲಭ್ಯವಿರದೆ ಇದ್ದುದರಿಂದ o-ರಕ್ತ ನೀಡಿದ್ದಾರೆ. ನಂತರ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಅವರು ಅಲ್ಲಿ ಮೃತಪಟ್ಟಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.